ಉ.ಕ. ಸಂಸದರ ಹೊಣೆಗೇಡಿತನದ ಉತ್ತರ!

Update: 2019-06-25 18:15 GMT

ಮಾನ್ಯರೇ,

ಉತ್ತರಕನ್ನಡ ಜಿಲ್ಲೆಯ ಸಂಸದ ಕೇಂದ್ರದ ಮಾಜಿ ಸಚಿವ ಅನಂತ ಕುಮಾರ್ ಹೆಗಡೆ ನಿಜಕ್ಕೂ ತಮ್ಮನ್ನು ಅತಿ ಬುದ್ಧ್ದಿವಂತನೆಂದು ತಿಳಿದುಕೊಂಡಿದ್ದಾರೆ. ಅವರ ಪ್ರತಿಯೊಂದು ಭಾಷಣದಲ್ಲೂ ತಾವೇ ಬುದ್ದಿವಂತರು ಇತರರು ದಡ್ಡರು ಎನ್ನುವ ಅಹಂ ದರ್ಶನವಾಗುತ್ತದೆ. ಉ.ಕ. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯನ್ನಿಟ್ಟುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಅಭಿಯಾನವೇ ಆರಂಭಗೊಂಡಿದೆ. ಇದಕ್ಕೆ ಪಕ್ಷಾತೀತವಾಗಿ ಜನರು ಬೆಂಬಲಿಸುತ್ತಿದ್ದಾರೆ. ಹಲವು ಕಡೆಗಳಲ್ಲಿ ಸಭೆಗಳೂ ಕೂಡ ನಡೆದಿವೆ. ಆದರೆ ನಮ್ಮ ಸಂಸದರಿಗೆ ಇದರ ಪರಿವೆಯೇ ಇಲ್ಲವೆನ್ನುವಂತೆ, ಜಿಲ್ಲೆಗೂ ತಮಗೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದ ಇವರು ರವಿವಾರ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಭಿಯಾನದ ಕುರಿತು ಸಂಸದರ ಗಮನ ಸೆಳೆಯಲು ಪ್ರಯತ್ನಿಸಿದಾಗ ಅಸಮಾಧಾನದಿಂದಲೇ ಪತ್ರಕರ್ತರ ಮೇಲೆ ರೇಗಿದ ಅವರು ‘‘ನಿಮಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕಿದ್ದಲ್ಲಿ ಸೋಶಿಯಲ್ ಮೀಡಿಯಾದವರನ್ನೇ ಕೇಳಿ’’ ಎಂಬ ಉದ್ಧಟತನದ ಮಾತನ್ನು ಆಡಿದ್ದಾರೆ.

ಅಲ್ಲದೆ ಅಲ್ಲಿಗೆ ಮನವಿ ಪತ್ರ ಸಲ್ಲಿಸಲು ಬಂದವರ ಮೇಲೂ ಎರಗಿಬಿದ್ದಿದ್ದು ‘‘ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವ ನಿಮ್ಮ ಮನವಿ ಪತ್ರವನ್ನು ನಾನು ಸ್ವೀಕರಿಸುವುದಿಲ್ಲ’’ ಎಂದು ಹೇಳುವುದರ ಮೂಲಕ ಜನಪ್ರತಿನಿಧಿಯಾದ ವ್ಯಕ್ತಿ ತನ್ನ ಬೇಜವಾಬ್ದಾರಿ ನಡವಳಿಕೆಯಿಂದಾಗಿ ಸಾರ್ವಜನಿಕರು ಆಕ್ರೋಶಿತರಾಗುವಂತೆ ಮಾಡಿದ್ದಾರೆ. ಮನವಿ ಅರ್ಪಿಸುವುದು, ಬೇಡಿಕೆ ಇಡುವುದು ಅದು ಸಾರ್ವಜನಿಕ ವೇದಿಕೆಯಾಗಿರಲಿ, ಅಥವಾ ಸೋಶಿಯಲ್ ಮೀಡಿಯಾ ಆಗಿರಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಪ್ರಜೆಗಳ ಹಕ್ಕಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ತನಗೆ ಅಪಪ್ರಚಾರವಾಗುತ್ತಿದೆ ಎಂದು ಹೇಳಿ ಸಮಸ್ಯೆಗಳು ಆಲಿಸದೆ ಅದಕ್ಕೆ ಸ್ಪಂದಿಸದೆ ಹೊಣೆಗೇಡಿತನ ಮೆರೆದ ಸಂಸದರ ಕ್ರಮ ಉತ್ತರಕನ್ನಡ ಜಿಲ್ಲಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ಇನ್ನು ಮುಂದಾದರೂ ಸಂಸದರು ಜವಾಬ್ದಾರಿಯಿಂದ ವರ್ತಿಸಲು ಕಲಿಯಲಿ ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ.

Writer - -ಎಂ. ಆರ್. ಮಾನ್ವಿ, ಭಟ್ಕಳ

contributor

Editor - -ಎಂ. ಆರ್. ಮಾನ್ವಿ, ಭಟ್ಕಳ

contributor

Similar News