ಚಂದ್ರಬಾಬು ನಾಯ್ಡು ಕಟ್ಟಿದ 8 ಕೋಟಿ ರೂ.ವೆಚ್ಚದ ಕಟ್ಟಡದ ಧ್ವಂಸ ಕಾರ್ಯ ಆರಂಭ

Update: 2019-06-26 04:51 GMT

 ಅಮರಾವತಿ, ಜೂ.26: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 8 ಕೋ.ರೂ. ವೆಚ್ಚದಲ್ಲಿ ಕಟ್ಟಿರುವ ಗಾಜಿನ ಗೋಡೆಯ ಕಟ್ಟಡವನ್ನು ಧ್ವಂಸಗೊಳಿಸುವ ಕಾರ್ಯ ಮಂಗಳವಾರ ತಡರಾತ್ರಿ ಆರಂಭವಾಗಿದೆ. ನಾಯ್ಡು ಸಾರ್ವಜನಿಕರ ಭೇಟಿಗೆ, ಪತ್ರಿಕಾಗೋಷ್ಠಿ ನಡೆಸಲು ಹಾಗೂ ಆಡಳಿತಾತ್ಮಕ ಕೆಲಸವನ್ನು ಇದೇ ಕಟ್ಟಡದಲ್ಲಿ ನಿರ್ವಹಿಸುತ್ತಿದ್ದರು. ಈ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಿರುವ ಆಂಧ್ರದ ನೂತನ ಸಿಎಂ ಜಗನ್ ಮೋಹನ್ ರೆಡ್ಡಿ ಕಟ್ಟಡವನ್ನು ಕೆಡವಿ ಹಾಕಲು ಆದೇಶಿಸಿದ್ದರು.

ಪ್ರಜಾ ವೇದಿಕಾ ಹೆಸರಿನ ಈ ಕಟ್ಟಡವು ನಾಯ್ಡು ಅವರ ನಿವಾಸದ ಸಮೀಪವೇ ಇದೆ. 2017ರಲ್ಲಿ ತೆಲುಗು ದೇಶಂ ಪಕ್ಷ(ಟಿಡಿಪಿ)ಸರಕಾರ ಕಟ್ಟಿರುವ ಈ ಕಟ್ಟಡ ಅಕ್ರಮವಾಗಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ. 5 ಕೋ.ರೂ. ಯೋಜನೆಯು ಅಂತಿಮವಾಗಿ 8 ಕೋ.ರೂ.ಗೆ ಏರಿಕೆಯಾಗಿತ್ತು.

 ರೆಡ್ಡಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪ್ರಜಾ ವೇದಿಕಾ ಕಟ್ಟಡವನ್ನು ಧ್ವಂಸಗೊಳಿಸುವುದಾಗಿ ಘೋಷಿಸಿದ್ದರು.

ಪ್ರಜಾ ವೇದಿಕಾ ಕಟ್ಟಡವನು ಧ್ವಂಸಗೊಳಿಸದಂತೆ ಸಿಎಂ ರೆಡ್ಡಿಗೆ ಈ ಮೊದಲೇ ವಿನಂತಿಸಿರುವ ಟಿಡಿಪಿ ಮುಖ್ಯಸ್ಥ ನಾಯ್ಡು, ರಾಜ್ಯ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕನಾಗಿ ಈ ಕಟ್ಟಡದಲ್ಲೇ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ವಿನಂತಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News