ಎಂಸಿಸಿ ಬ್ಯಾಂಕಿನಿಂದ ವಾರ್ಷಿಕ ಸಿಬ್ಬಂದಿ ಸಮ್ಮೇಳನ -2019

Update: 2019-06-26 06:00 GMT

ಮಂಗಳೂರು, ಜೂ.26: ಎಂಸಿಸಿ ಬ್ಯಾಂಕ್ ಮಂಗಳೂರು ಇದರ ವತಿಯಿಂದ 2019ನೇ ಸಾಲಿನ ಬ್ಯಾಂಕಿನ ವಾರ್ಷಿಕ ಸಿಬಂದಿ ಸಮ್ಮೇಳನವನ್ನು ಮಂಗಳೂರಿನ ಮಿಲಾಗ್ರಿಸ್ ಸೆನೆಟ್ ಹಾಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಪ್ರೊಕ್ಯೂರೇಟರ್ ವಂದನಿಯ ಫಾ.ವಿಜಯ್ ವಿಕ್ಟರ್ ಲೋಬೊ, ದೀಪ ಬೆಳಗಿಸಿ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬ್ಯಾಂಕಿನ ಸಿಬ್ಬಂದಿಯು ಗ್ರಾಹಕ ಸ್ನೇಹಿಯಾಗಿರಬೇಕು ಹಾಗೂ ಸಮಾಜದ ಎಲ್ಲಾ ವರ್ಗದ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡಲು ಬದ್ಧರಾಗಿರಬೇಕು ಎಂದು ಸಲಹೆ ನೀಡಿದರು.

ಬ್ಯಾಂಕಿನ ಪ್ರಗತಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದ ಬ್ಯಾಂಕಿನ ಹಿಂದಿನ ಕಾರ್ಯಾನುಗುಣ ನಿರ್ದೇಶಕ ಸ್ಟೀಫನ್ ಪಿಂಟೊ, 2018-19ನೇ ಸಾಲಿನ ಬ್ಯಾಂಕಿನ ಪ್ರಗತಿಯನ್ನು ಅವಲೋಕಿಸಿ, ಬ್ಯಾಂಕಿನ ಸಿಬ್ಬಂದಿಯು ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಮತ್ತು ಬ್ಯಾಂಕಿನ ಎಲ್ಲಾ ಗ್ರಾಹಕರು ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಪಡೆಯಲು ಉತ್ತೇಜಿಸಬೇಕು ಎಂದು ಕರೆ ನೀಡಿದರು.

2019-20ನೇ ಸಾಲಿನಲ್ಲಿ ಬ್ಯಾಂಕಿನ ಶಾಖೆಗಳಿಗೆ ನೀಡಿದ ಗುರಿಯನ್ನು ಸಾಧಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.

ಬ್ಯಾಂಕಿನಲ್ಲಿ ಭದ್ರತಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಿದ ದ.ಕ. ಜಿಲ್ಲಾ ಉಪ ಪೊಲೀಸ್ ಆಯುಕ್ತ ಹನುಮಂತರಾಯ, ಬ್ಯಾಂಕಿನ ಸಿಬ್ಬಂದಿಯು ಬ್ಯಾಂಕಿನ ದೈನಂದಿನ ವ್ಯವಹಾರದ ಸಮಯದಲ್ಲಿ ಗ್ರಾಹಕರಿಗೆ ಸೇವೆಯನ್ನು ನೀಡುವ ಸಂದರ್ಭ ಜಾಗರೂಕರಾಗಿರಬೇಕು. ಬ್ಯಾಂಕಿನಲ್ಲಿ ನಡೆಯಬಹುದಾದ ಸೈಬರ್ ಕ್ರೈಂ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.

ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ಬ್ಯಾಂಕಿನ ಒಳಿತಿಗಾಗಿ ಪೂರ್ವಭಾವಿಯಾಗಿ ಕೆಲಸ ಮಾಡಲು ಹಾಗೂ ಬ್ಯಾಂಕಿನ ಗ್ರಾಹಕರೊಂದಿಗೆ ಸಕಾರತ್ಮಕರಾಗಲು ಕರೆ ನೀಡಿದರು.

ನಿರ್ದೇಶಕ ಎಲ್‌ರೊಯ್ ಕಿರಣ್ ಕ್ರಾಸ್ಟೊ, ಜೆ.ಪಿ.ರೊಡ್ರಿಗಸ್, ಹೆರಾಲ್ಡ್ ಮೊಂತೇರೊ, ಡಾ.ಫ್ರೀಡಾ ಪ್ಲೇವಿಯ ಡಿಸೋಜ, ಡೆವಿಡ್ ಡಿಸೋಜ, ಅಂಡ್ರೂ ಡಿಸೋಜ, ಕ್ಲೆಮೆಂಟ್ ಜಿ. ಪಿಂಟೊ ಮತ್ತು ಮೈಕಲ್ ಡಿಸೋಜ ಉಪಸ್ಥಿತರಿದ್ದರು.

ಬ್ಯಾಂಕಿನ ಉಪಾಧ್ಯಕ್ಷ ಜೂಡ್ ಜೆರಾಲ್ಡ್ ಡಿಸಿಲ್ವ ಸ್ವಾಗತಿಸಿ, ಸಮ್ಮೇಳನದ ಉದ್ದೇಶವನ್ನು ವಿವರಿಸಿದರು. ಮಹಾಪ್ರಬಂಧಕ ಸುನೀಲ್ ಮಿನೇಜಸ್ ವಂದಿಸಿದರು.

ಬ್ಯಾಂಕಿನ ನಿರ್ದೇಶಕ ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News