ಜುಲೈ 17ರಿಂದ ಮಂಗಳೂರಿನಿಂದ ಹಜ್ ಯಾನ ಆರಂಭ

Update: 2019-06-26 07:45 GMT

ಮಂಗಳೂರು, ಜೂ.26: ಕೇಂದ್ರ ಹಜ್ ಸಮಿತಿಯ ಮೂಲಕ ಮಂಗಳೂರು ವಿಮಾನ ನಿಲ್ದಾಣದಿಂದ ಜುಲೈ 17, 18 ಮತ್ತು 19ರಂದು ಹಜ್ ಯಾನ ನಡೆಯಲಿದೆ.

ದ.ಕ., ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 600 ಹಜ್ ಯಾತ್ರಿಕರು ಮೂರು ದಿನಗಳ ಕಾಲ ನಾಲ್ಕು ವಿಮಾನಗಳಲ್ಲಿ ನೇರವಾಗಿ ಮದೀನಾಕ್ಕೆ ಯಾತ್ರೆ ಕೈಗೊಳ್ಳಲಿದ್ದಾರೆ.

ಜುಲೈ 17ರಂದು ಸಂಜೆ 5, ಜುಲೈ 18ರಂದು ಬೆಳಗ್ಗೆ 10 ಮತ್ತು 11 ಗಂಟೆ ಹಾಗೂ ಜುಲೈ 19ರಂದು ಮುಂಜಾನೆ 4 ಗಂಟೆಗೆ ವಿಮಾನ ಹೊರಡಲಿದೆ. ಪ್ರತಿಯೊಂದು ವಿಮಾನದಲ್ಲೂ ತಲಾ 150 ಯಾತ್ರಿಗಳಿರುತ್ತಾರೆ. ಆಗಸ್ಟ್ 31, ಸೆಪ್ಟಂಬರ್ 1 ಮತ್ತು 2ರಂದು ಈ ಯಾತ್ರಿಕರು ಮರಳಲಿದ್ದಾರೆ. ಮೊದಲ ವಿಮಾನದಲ್ಲಿ ತೆರಳುವ ಯಾತ್ರಿಗಳು 45 ದಿನಗಳ ಮತ್ತು ಆ ಬಳಿಕದ ಮೂರು ವಿಮಾನಗಳಲ್ಲಿ ತೆರಳುವ ಯಾತ್ರಿಗಳು 46 ದಿನಗಳ ಕಾಲ ಯಾತ್ರೆಯಲ್ಲಿರುತ್ತಾರೆ.

ಈಗಾಗಲೆ ರಾಜ್ಯ ಹಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸರ್ಫ್ರಾಝ್ ಖಾನ್ ಸರ್ದಾರ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಸಂಬಂಧ ನಡೆಸುವ ತಯಾರಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಂದರ್ಭ ಹಜ್ ನೋಡಲ್ ಅಧಿಕಾರಿ ಸೈಯದ್ ಇಜಾಝ್ ಅಹ್ಮದ್, ಹಜ್ ಸಮಿತಿಯ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಜಿ ಯೆನೆಪೊಯ ಮುಹಮ್ಮದ್ ಕುಂಞಿ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ.ರಾವ್, ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News