ಇವಿಎಂ ವಿರೋಧಿ ಅಂಚೆಪತ್ರ ಚಳವಳಿ: ಮಹಿಳಾ ಕಾಂಗ್ರೆಸ್‌ನಿಂದ ಮೌನ ಪ್ರತಿಭಟನೆ

Update: 2019-06-26 09:30 GMT

ಮಂಗಳೂರು, ಜೂ.26: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ರಾಜ್ಯ ಕಾಂಗ್ರೆಸ್ ನಿರ್ಣಯದಂತೆ ಇ.ವಿ.ಎಂ. ವಿರೋಧಿಸಿ ನಗರದ ಬಲ್ಮಠ ರಸ್ತೆಯಲ್ಲಿರುವ ಅಂಚೆ ಕಚೇರಿಯ ಎದುರುಗಡೆ ಬುಧವಾರ ಮೌನ ಪ್ರತಿಭಟನೆ ಹಾಗೂ ಅಂಚೆ ಪತ್ರ ಚಳವಳಿ ನಡೆಯಿತು.

ಇವಿಎಂ ಅವ್ಯವಸ್ಥೆಯ ಆಗರವಾಗಿದೆ. ಇವಿಎಂ ಯಂತ್ರ ಹ್ಯಾಕ್ ಮಾಡಿ ತಮಗೆ ಬೇಕಾದ ಅಭ್ಯರ್ಥಿಯನ್ನು ಗೆಲ್ಲಿಸಬಹುದಾಗಿದೆ. ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಇವಿಎಂ ತೊಲಗಬೇಕು ಮತ್ತು ಮತಪತ್ರ ಮತ್ತೆ ಜಾರಿಗೆ ಬರಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ ಹೇಳಿದರು.

ಪ್ರತಿಭಟನೆಯ ಅಂಗವಾಗಿ ಕರ್ನಾಟಕದಾದ್ಯಂತ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅಂಚೆ ಪತ್ರವನ್ನು ರಾಷ್ಟ್ರಪತಿಯವರಿಗೆ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಅಂಚೆಪತ್ರ ಬರೆದು ರಾಷ್ಟ್ರಪತಿಯವರಿಗೆ ಅಂಚೆ ಮೂಲಕ ರವಾನಿಸಲಾಯಿತು.

ಮೌನ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಭಾರತಿ ಬಿ.ಎಂ., ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲಾ ಗಟ್ಟಿ, ಮಾಜಿ ಕಾರ್ಪೊರೇಟರ್‌ಗಳಾದ ಜೆಸಿಂತಾ ವಿಜಯ, ಅಪ್ಪಿ, ಸಬಿತಾ ಮಿಸ್ಕಿತ್, ಅಖಿಲಾ ಆಳ್ವ, ರತಿಕಲಾ ಮತ್ತು ಪ್ರಮೀಳಾ ದೇವಾಡಿಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News