ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಬೇಕೆಂಬ ಸಂಸದರ ಮನವಿ ತಿರಸ್ಕರಿಸಿದ ರಾಹುಲ್ ಗಾಂಧಿ

Update: 2019-06-26 09:20 GMT

 ಹೊಸದಿಲ್ಲಿ, ಜೂ.26: ನೀವೇ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಪಕ್ಷದ ಸಂಸದರು ಬುಧವಾರ ಮನವಿ ಮಾಡಿಕೊಂಡ ಹೊರತಾಗಿಯೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸುವ ತನ್ನ ನಿರ್ಧಾರ ಅಚಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.

‘‘ಇದು ಚರ್ಚಿಸುವ ವೇದಿಕೆಯಲ್ಲ. ನೀವೆಲ್ಲಾ ಈ ವಿಚಾರವನ್ನು ಎತ್ತಿದ್ದೀರಿ. ನನ್ನ ನಿರ್ಧಾರದ ಬಗ್ಗೆ ಸಿಡಬ್ಲುಸಿಯಲ್ಲಿ ಹೇಳಿದ್ದೇನೆ. ಹೊಣೆಗಾರಿಕೆ ಎನ್ನುವುದು ಇರುತ್ತದೆ’’ ಎಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷ ಸಭೆಯಲ್ಲಿ ರಾಹುಲ್ ಹೇಳಿದ್ದಾರೆ.

‘‘ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವವರು ಯಾರೂ ಇಲ್ಲ. ನೀವೇ ಪಕ್ಷವನ್ನು ಮುನ್ನಡೆಸಬೇಕು’’ ಎಂದು ಕಾಂಗ್ರೆಸ್ ಸಂಸದರಾದ ಶಶಿ ತರೂರ್ ಹಾಗೂ ಮನೀಶ್ ತಿವಾರಿ ಅವರು ರಾಹುಲ್‌ಗೆ ಮನವಿ ಮಾಡಿದರು.

ತನ್ನ ಹಿಂದಿನ ನಿರ್ಧಾರದಂತೆಯೇ ಅಧ್ಯಕ್ಷ ಸ್ಥಾನವನ್ನು ತ್ಯಜಿಸುವುದಕ್ಕೆ ಬದ್ಧವಾಗಿದ್ದೇನೆ ಎಂದರು.

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಿಗೇ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿ,‘‘ಪಕ್ಷದ ವೈಫಲ್ಯಕ್ಕೆ ಶೇ.100ರಷ್ಟು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. 52 ಸದಸ್ಯರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಾನು ಅಧ್ಯಕ್ಷ ಸ್ಥಾನ ತ್ಯಜಿಸುತ್ತೇನೆ’’ ಎಂದು ಘೋಷಿಸಿದ್ದರು.

 ರಾಷ್ಟ್ರೀಯ ವಿದ್ಯಾರ್ಥಿ ಯೂನಿಯನ್‌ನ ನೂರಾರು ಕಾರ್ಯಕರ್ತರು ಇಂದು ರಾಹುಲ್ ಗಾಂಧಿ ಮನೆಯ ಹೊರಗೆ ಜಮಾಯಿಸಿ, ನೇಶನ್ ನೀಡ್ಸ್ ಯೂ ರಾಹುಲ್, ಹಾಗೂ ನೀವಿರದಿದ್ದರೂ ನಾವ್ಯಾರು ಅಲ್ಲ ಎಂದು ಬರೆದಿರುವ ಭಿತ್ತಿಪತ್ರವನ್ನು ಹಿಡಿದಿದ್ದರು

ಕಾಂಗ್ರೆಸ್, ರಾಹುಲ್ ಪದತ್ಯಾಗದ ನಿರ್ಧಾರವನ್ನು ಈ ತನಕ ಒಪ್ಪಿಕೊಂಡಿಲ್ಲ. ಆದರೆ, ಅವರು ಕಳೆದ ಕೆಲವು ವಾರಗಳಿಂದ ತನ್ನ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News