ಕಾರ್ಮಿಕರ ಚಳವಳಿಯಿಂದ ಆಳುವ ವರ್ಗಗಳ ದಮನಕಾರಿ ನೀತಿ ಹಿಮ್ಮೆಟ್ಟಿಸಲು ಸಾಧ್ಯ: ವಸಂತ ಆಚಾರಿ

Update: 2019-06-26 10:42 GMT

ಮಂಗಳೂರು, ಜೂ.26: ಬದಲಾದ ರಾಜಕೀಯ ಸನ್ನಿವೇಶದಲ್ಲಿ ದೇಶದ ಕಾರ್ಮಿಕ ವರ್ಗ ಮುಂದಿನ ದಿನಗಳಲ್ಲಿ ತೀವ್ರವಾದ ಸಂಕಷ್ಟಗಳನ್ನು ಅನುಭವಿಸಲಿದೆ. ದೇಶವನ್ನಾಳುವ ಕೇಂದ್ರ ಸರಕಾರವು ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡುವ ಮೂಲಕ ಕಾರ್ಪೊರೇಟ್ ಕಂಪೆನಿಗಳ ಋಣ ಸಂದಾಯ ಮಾಡುತ್ತಿದೆ. ಕಾರ್ಮಿಕ ವರ್ಗದ ಏಳಿಗೆಗಾಗಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸುತ್ತಿಲ್ಲ. ಇಂತಹ ಸಂಧರ್ಭದಲ್ಲಿ ದೇಶದ ಕಾರ್ಮಿಕ ವರ್ಗ ಒಂದಾಗಿ ಆಳುವ ವರ್ಗಗಳ ದಮನಕಾರಿ ನೀತಿಗಳನ್ನು ಹಿಮ್ಮೆಟ್ಟಿಸಲು ಸಮರಶೀಲ ಹೋರಾಟಗಳನ್ನು ರೂಪಿಸಬೇಕಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಹೇಳಿದರು.

ನಗರದ ಎನ್‌ಜಿಒ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸಿಐಟಿಯು ಸುವರ್ಣ ಮಹೋತ್ಸವ ಆಚರಣಾ ಸಮಿತಿ ರಚನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕಾರ್ಮಿಕ ವರ್ಗದ ವಿರೋಧಿಯಾದ ನರೇಂದ್ರ ಮೋದಿ ಸರಕಾರವು ಮತ್ತೆ ಅಧಿಕಾರಕ್ಕೇರಿದ್ದು, ಕಾರ್ಮಿಕರ ಸಂಕಷ್ಟಗಳು ದುಪ್ಪಟ್ಟಾಗಲಿದೆ. ಕನಿಷ್ಠ ಕೂಲಿ, ಪಿಂಚಣಿ, ಸಾಮಾಜಿಕ ಭದ್ರತೆಗಾಗಿ ಹೋರಾಡುತ್ತಿರುವ ಕಾರ್ಮಿಕರು ಉದ್ಯೋಗವನ್ನೇ ಕಳೆದುಕೊಳ್ಳುವಂತಹ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದರು.

ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡ ಯು.ಬಿ.ಲೋಕಯ್ಯ, ಪದ್ಮಾವತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು.

ಸುವರ್ಣ ಮಹೋತ್ಸವ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸಲು ವಿವಿಧ ಸಂಘಟನೆಗಳ ಮುಖಂಡರಾದ ಬಿ.ಎಂ.ಮಾಧವ, ವಾಸುದೇವ ಉಚ್ಚಿಲ್, ಡಾ.ಕೃಷ್ಣಪ್ಪಕೊಂಚಾಡಿ, ಯಾದವ ಶೆಟ್ಟಿ, ಸಂತೋಷ್ ಬಜಾಲ್, ಬಿ.ಎನ್.ದೇವಾಡಿಗ, ಲಕ್ಷ್ಮಣನ್, ಮಾಧುರಿ ಬೋಳಾರ, ಅಲಿ ಹಸನ್, ರಾಮಚಂದ್ರ ಬಬ್ಬುಕಟ್ಟೆ ಸಲಹೆಗಳನ್ನು ನೀಡಿದರು.

ಸಿಐಟಿಯು ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News