ಮಾದಕ ದ್ರವ್ಯ ಮಾರಾಟ-ಸೇವಿಸುವವರ ವಿರುದ್ಧ ಕಠಿಣ ಕ್ರಮ: ಸಂದೀಪ್ ಪಾಟೀಲ್

Update: 2019-06-26 12:06 GMT

ಮಂಗಳೂರು, ಜೂ.26: ಯಾವುದೇ ರೀತಿಯ ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಮತ್ತು ಸೇವಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಮಾರಾಟಗಾರರು ಹಾಗೂ ಡೀಲರ್‌ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಎಚ್ಚರಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ವತಿಯಿಂದ ನಗರದ ಪುರಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಹಾಗೂ ಕಳ್ಳಸಾಗಾಟ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಯುವಕರನ್ನು ತಪ್ಪು ದಾರಿಗೆಳೆಯುತ್ತಿರುವ ಮಾದಕ ದ್ರವ್ಯಗಳ ಮಾರಾಟಗಾರರು, ಡೀಲರ್ ಸಹಿತ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಮೇಲೆ ಪೊಲೀಸ್ ಇಲಾಖೆಯು ತೀವ್ರ ನಿಗಾ ವಹಿಸುತ್ತಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದರು.

ದೇರಳಕಟ್ಟೆ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ೊರೆನ್ಸಿಕ್ ವಿಭಾಗ ಮುಖ್ಯಸ್ಥ ಡಾ. ಮಹಾಬಲ ಶೆಟ್ಟಿ ಮಾತನಾಡಿ ಕಾಶ್ಮೀರ, ಪಂಜಾಬ್ ಮತ್ತಿತರ ಕಡೆ ನಾರ್ಕೋ ಟೆರರಿಸಂ ವ್ಯಾಪಕವಾಗಿದೆ. ಶ್ರೀನಗರವೊಂದರಲ್ಲೇ 80 ಸಾವಿರ ಮಂದಿ ಮಾದಕ ವ್ಯಸನಕ್ಕೆ ಒಳಗಾಗಿದ್ದು, ಈ ಪೈಕಿ 15 ಸಾವಿರ ಯುವತಿಯರೂ ಸೇರಿದ್ದಾರೆ ಎಂಬುದಾಗಿ ಅಲ್ಲಿನ ಪ್ರಖ್ಯಾತ ಮನಃಶಾಸಜ್ಞರೊಬ್ಬರು ಹೇಳುತ್ತಾರೆ. ಕೇರಳದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ಮಾದಕ ದ್ರವ್ಯ ವ್ಯಸನದ ಪರಿಣಾಮವಾಗಿಯೇ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮನಃಶಾಸಜ್ಞೆ ಕ್ಯಾರೋಲಿನ್ ಸಿ. ಡಿಸೋಜ ಮಾತನಾಡಿ ಭಾರತದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಶೇ.50ರಷ್ಟು ಯುವಕರು ಮಾದಕ ದ್ರವ್ಯ ವ್ಯಸನಕ್ಕೊಳಗಾದವರೇ ಆಗಿದ್ದಾರೆ. ಇದೊಂದು ಮಾನಸಿಕ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲೇ ಇಂತಹವರನ್ನು ಗುರುತಿಸಿ ಚಿಕಿತ್ಸೆ ನೀಡಬೇಕಾದ ಅವಶ್ಯವಿದೆ ಎಂದರು.

ಲಿಂಕ್ ಪುನರ್ವಸತಿ ಕೇಂದ್ರದ ಮುಖ್ಯಸ್ಥೆ ಲಿಡಿಯಾ ಲೋಬೊ, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರೊೆಸರ್ ಅನಂತ ಪ್ರಭು ಜಿ. ಮತ್ತಿತರರು ಉಪಸ್ಥಿತರಿದ್ದರು.

ಡಿಸಿಪಿ ಹನುಮಂತರಾಯ ಸ್ವಾಗತಿಸಿದರು. ಮಂಗಳೂರು ನಗರ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭಾಸ್ಕರ್ ಒಕ್ಕಲಿಗ ವಂದಿಸಿದರು. ಬಂದರು ಸಂಚಾರ ಠಾಣೆಯ ನಿರೀಕ್ಷಕ ಗುರುದತ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News