ಮೆದುಳುಜ್ವರದಿಂದ ಮಕ್ಕಳು ಮೃತ್ಯು: ನೀರಿಗಾಗಿ ಪ್ರತಿಭಟಿಸಿದ ತಂದೆಯ ವಿರುದ್ಧ ಎಫ್ಐಆರ್

Update: 2019-06-26 11:51 GMT

ಪಾಟ್ನಾ, ಜೂ.26: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಮೆದುಳಿನ ಉರಿಯೂತಕ್ಕೆ ತಮ್ಮ ಮಕ್ಕಳನ್ನು ಕಳೆದುಕೊಂಡ ಇಬ್ಬರು ವ್ಯಕ್ತಿಗಳ ಸಹಿತ 19 ಮಂದಿಯ ವಿರುದ್ಧ ಪೊಲೀಸರು ಮುಝಫ್ಫರಪುರ್-ಹಾಜಿಪುರ್ ಹೆದ್ದಾರಿಯಲ್ಲಿ ನಡೆದ ಪ್ರತಿಭಟನೆ ವೇಳೆ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ.

ಹದಿನೈದು ದಿನಗಳ ಅವಧಿಯಲ್ಲಿ ತಮ್ಮ ಗ್ರಾಮದಲ್ಲಿ ಏಳು ಮಕ್ಕಳು ಎನ್ಸಿಫಾಲಿಟಿಸ್ ರೋಗಕ್ಕೆ ತುತ್ತಾದ ನಂತರ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸಿ ಹರ್ವಂಶಪುರ್ ಗ್ರಾಮದ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಹತ್ತೊಂಬತ್ತು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 147,148, 149, 188, 283, 353 ಹಾಗೂ 504 ಅನ್ವಯ ಪ್ರಕರಣ ದಾಖಲಾಗಿದೆ.

``ನಮ್ಮ ಮಕ್ಕಳು ಸಾಯುತ್ತಿದ್ದರೂ ಸರಕಾರ ನಮ್ಮ ಮಾತುಗಳನ್ನು ಆಲಿಸುತ್ತಿಲ್ಲ, ಟ್ಯಾಂಕರ್ ಮೂಲಕ ನೀರಿಗಾಗಿ ಪ್ರತಿಭಟಿಸಿದ್ದೆವು. ಎಫ್‍ಐಆರ್‍ನಲ್ಲಿ ನನ್ನ ಹೆಸರು ನೋಡಿ ಅಚ್ಚರಿಯಾಯಿತು'' ಎಂದು ತನ್ನ ಏಳು ವರ್ಷದ ಪುತ್ರಿಯನ್ನು ಕಳೆದುಕೊಂಡಿರುವ ರಾಜೇಶ್ ಸಾಹ್ನಿ ಹೇಳುತ್ತಾನೆ.

ಈ ಪ್ರತಿಭಟನೆಯ ನಂತರವಷ್ಟೇ ಸರಕಾರ ಎಚ್ಚೆತ್ತುಕೊಂಡು ಹರ್ವಂಶಪುರ್ ನಲ್ಲಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳ ತಪಾಸಣೆ ನಡೆಸಲಾಗಿತ್ತು ಎಂದವರು ಹೇಳುತ್ತಾರೆ.

ತನ್ನ ಎರಡು ವರ್ಷದ ಪುತ್ರಿಯನ್ನು ಕಳೆದುಕೊಂಡ ರಾಮದೇವ್ ಸಾಹ್ನಿ ಕೂಡ ಆರೋಪಿಗಳೆಂದು ಹೆಸರಿಸಲ್ಪಟ್ಟವರಲ್ಲಿ ಸೇರಿದ್ದಾರೆ. “ನೀರಿನ ಟ್ಯಾಂಕರ್ ಗೆ ಬೇಡಿಕೆಯಿರಿಸುವುದು ತಪ್ಪೇ?'' ಎಂದು ಆತ ಕೇಳುತ್ತಾನೆ.

ಪೊಲೀಸರು ಗ್ರಾಮಸ್ಥರ ವಿರುದ್ಧ ದಾಖಲಿಸಿರುವ ಎಫ್‍ಐಆರ್ ಕೈಬಿಡಬೇಕೆಂದು ಹಲವಾರು ಸಂಘಟನೆಗಳು ಆಗ್ರಹಿಸಿವೆ. ಆದರೆ ಅವರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News