ಸಜೀಪನಡು -ತುಂಬೆ ನಡುವೆ ಸೇತುವೆ: ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

Update: 2019-06-26 12:18 GMT

ಬಂಟ್ವಾಳ, ಜೂ.26: ಸಜೀಪನಡು ಹಾಗೂ ತುಂಬೆ ನಡುವೆ ಸಂಪರ್ಕ ಸಾಧಿಸುವ ಸೇತುವೆ ನಿರ್ಮಾಣ ಕಾರ್ಯದ ಸ್ಥಳಕ್ಕೆ ಕರ್ಣಾಟಕ ಸರಕಾರದ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಶ್ರೀ ಕೃಷ್ಣ ರೆಡ್ಡಿ ಅವರು ತಮ್ಮ ತಾಂತ್ರಿಕ ವಿಭಾಗಾಧಿಕಾರಿಗಳೊಂದಿಗೆ ಇತ್ತೀಚೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಸ್ಥಳೀಯ ನಿವಾಸಿಗಳ ಬಹುಕಾಲದ ಬೇಡಿಕೆಯಾದ ಪ್ರಸ್ತುತ ಸೇತುವೆ ನಿರ್ಮಾಣಗೊಂಡರೆ ಸಜೀಪನಡು ಹಾಗೂ ಆಸುಪಾಸಿನ ಜನತೆಗೆ ಮಂಗಳೂರು 10 ರಿಂದ 12 ಕಿ.ಮೀ ಹತ್ತಿರವಾಗಲಿದೆ. ಅಲ್ಲದೇ, ತುಂಬೆ ಪರಿಸರದ ಜನತೆಗೆ ಮುಡಿಪು, ಮಂಗಳೂರು ವಿವಿ ಹಾಗೂ ದೇರಳಕಟ್ಟೆ ವ್ಯಾಪ್ತಿಯ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು ಇನ್ನಷ್ಟು ಹತ್ತಿರವಾಗಲಿದೆ. ಸುಮಾರು 25 ಕೋಟಿ ರೂ. ವೆಚ್ಚದ ಈ ಯೋಜನೆ ಅನುಷ್ಟಾನಗೊಂಡರೆ ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು, ತುಂಬೆ, ಮೇರಮಜಲು ಗ್ರಾಮಗಳು ಕ್ಷೇತ್ರಕ್ಕೆ ನೇರ ಸಂಪರ್ಕ ಸಾಧಿಸಿದಂತಾಗುತ್ತದೆ.

'ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟುವ ಈ ಸೇತುವೆ ನಿರ್ಮಾಣಗೊಂಡರೆ ಈ ಪ್ರದೇಶದ ಬಹುಕಾಲದ ಕನಸು ನನಸಾಗಲಿದ್ದು, ಅಲ್ಲದೇ ಜನರು ಸುತ್ತಿ ಬಳಸಿ ಪ್ರಯಾಣಿಸುವ ಸಮಸ್ಯೆಗೆ ಮುಕ್ತಿ ದೊರೆತಂತಾಗುತ್ತದೆ ಎಂದು ಜಿ.ಪಂ ಮಾಜಿ ಸದಸ್ಯ ಹಾಜಿ ಎಸ್.ಅಬ್ಬಾಸ್ ತಿಳಿಸಿದ್ದಾರೆ.

ಭೇಟಿ ಸಂಧರ್ಭದಲ್ಲಿ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ ಎಸ್.ಅಬೂಬಕ್ಕರ್ ಸಜೀಪ, ಕೆಪಿಸಿ ಕರಾವಳಿ ವಲಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯು.ಬಿ ಸಲೀಂ, ಸಜೀಪ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ರಝಾಕ್ ಹಾಜಿ ಹಾಗೂ ಹಲವು ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News