ಅಸ್ಸಾಂ: ಮೃತ ಯೋಧನ ಪತ್ನಿಯ ಬಗ್ಗೆ ಅಶ್ಲೀಲ ಹೇಳಿಕೆ ಪೋಸ್ಟ್ ಮಾಡಿದ್ದ ವ್ಯಕ್ತಿಯ ಬಂಧನ

Update: 2019-06-26 13:58 GMT
ಸಾಂದರ್ಭಿಕ ಚಿತ್ರ

 ಗುವಾಹಟಿ, ಜೂ.26: ಮಾವೋವಾದಿಗಳಿಂದ ಹತರಾದ ಸಿಆರ್‌ಪಿಎಫ್ ಯೋಧನ ಪತ್ನಿಯ ಬಗ್ಗೆ ಅವಹೇಳನಕಾರಿ ಮತ್ತು ಅಶ್ಲೀಲ ಹೇಳಿಕೆಯನ್ನು ಪೋಸ್ಟ್ ಮಾಡಿದ್ದ ಆರೋಪದಲ್ಲಿ ಜಮ್ಮು ಕಾಶ್ಮೀರದ ನಿವಾಸಿಯನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

ಸಿಆರ್‌ಪಿಎಫ್ ಯೋಧ ಸುನಿಲ್ ಕಾಲಿತ ಕಳೆದ ತಿಂಗಳು ಜಾರ್ಖಂಡ್‌ನಲ್ಲಿ ಮಾವೋವಾದಿ ನಕ್ಸಲರ ದಾಳಿಯಲ್ಲಿ ಹುತಾತ್ಮರಾಗಿದ್ದರು. ಅಂತ್ಯಸಂಸ್ಕಾರ ಜೂನ್ 15ರಂದು ಹುಟ್ಟೂರಾದ ಅಸ್ಸಾಂನ ಕಾಮರೂಪ ಜಿಲ್ಲೆಯಲ್ಲಿ ನಡೆದಿದ್ದು ಈ ಸಂದರ್ಭ ಆತನ ಪತ್ನಿ ಪತಿಯ ಮೃತದೇಹಕ್ಕೆ ಸೆಲ್ಯೂಟ್ ಮಾಡುವ ಫೋಟೋಗೆ ಆರೋಪಿ ಅಬ್ಬಾಸ್ ಎಂಬಾತ ಅಶ್ಲೀಲವಾಗಿ ಅಡಿಬರಹ ನೀಡಿ ಅದನ್ನು ಅಸ್ಸಾಂನ ಟಿವಿ ಚಾನೆಲ್‌ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದ.

ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಅಸ್ಸಾಂ ಪೊಲೀಸರು ಜಮ್ಮು ಕಾಶ್ಮೀರಕ್ಕೆ ತೆರಳಿ ಅಬ್ಬಾಸ್‌ನನ್ನು ಜೂನ್ 22ರಂದು ಬಂಧಿಸಿದ್ದರು. ಈತನನ್ನು ಎಂಟು ದಿನದ ರಿಮಾಂಡ್‌ಗೆ ಪಡೆದು ಅಸ್ಸಾಂಗೆ ಕರೆತರಲಾಗಿದೆ ಎಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ. ಮಹಿಳೆಯರಿಗೆ ಗೌರವ ನೀಡುವುದು ಅತ್ಯಗತ್ಯವಾಗಿದೆ. ಮಹಿಳೆಯರ ಘನತೆಗೆ ಕುಂದುಂಟು ಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿಗಳ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News