ಔಷಧಗಳ ದುರ್ಬಳಕೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಕೆ.ವಿ.ನಾಗರಾಜ್

Update: 2019-06-26 14:25 GMT

ಉಡುಪಿ, ಜೂ. 26: ಔಷಧಗಳ ಮಿತಿಮೀರಿದ ದುರ್ಬಳಕೆಯಿಂದ ಮಾದಕ ದ್ರವ್ಯ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಔಷಧ ನಿಯಂತ್ರಣ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆಸ್ಪತ್ರೆ, ಔಷಧಾಲಯಗಳಲ್ಲಿ ಪ್ರತಿದಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಉಡುಪಿ ವಿಭಾಗದ ಸಹಾಯಕ ಔಷಧ ನಿಯಂತ್ರಕ ಕೆ.ವಿ.ನಾಗರಾಜ್ ತಿಳಿಸಿದ್ದಾರೆ.

ಉಡುಪಿ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವತಿಯಿಂದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯ ಪ್ರಯುಕ್ತ ಉಡುಪಿ ವಿವಿಧ ಕಾಲೇಜುಗಳ ನರ್ಸಿಂಗ್ ಮತ್ತು ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಯುವಜನತೆ ಮಾದಕ ವಸ್ತುಗಳನ್ನು ಪಡೆಯಲು ನರ್ಸ್‌ಗಳು ಹಾಗೂ ಫೋಷಕರು ದಾರಿ ಮಾಡಿಕೊಡುತ್ತಿದ್ದಾರೆ. ಸರಕಾರ ಈ ಔಷಧಗಳನ್ನು ನಿಷೇಧಿಸುವ ಮೊದಲೇ ನಾವು ಎಚ್ಚೆತ್ತುಕೊಂಡರೆ ನಿಜವಾಗಿ ಸಿಗಬೇಕಾದ ರೋಗಿಗಳಿಗೆ ಆ ಔಷಧಗಳು ದೊರೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅರ್ಹ ರೋಗಿಗಳು ಶಾಪ ಹಾಕುವ ಕಾಲ ಎದುರಿಸಬೇಕಾಗುತ್ತದೆ ಎಂದರು.

ನರ್ಸ್‌ಗಳು ವೈದ್ಯರು ನೀಡುವ ಔಷಧಿ ಚೀಟಿ(ಪ್ರಿಸ್ಕ್ರೀಪ್ಶನ್) ಬರೆಯುವಾಗ ಬಹಳ ದುರ್ಬಳಕೆ ಆಗುತ್ತಿರುತ್ತದೆ. ಆದುದರಿಂದ ನರ್ಸ್‌ಗಳಿಗೆ ಔಷಧಗಳು ದುರ್ಬಳಕೆ ಆಗದಂತೆ ತಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು. ಔಷಧಗಳು ಯಾವ ರೀತಿ ದುರ್ಬಳಕೆ ಆಗುತ್ತಿರುತ್ತದೆ ಎಂಬುದರ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದರು.

1989ರಿಂದ ಅಂದರೆ ಕಳೆದ 30ವರ್ಷಗಳಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಮಾಡುತ್ತ ಬಂದರೂ, ಹಲವು ಕಾನೂನುಗಳನ್ನು ಜಾರಿಗೆ ತಂದರೂ ಇನ್ನು ಕೂಡ ವ್ಯಸನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಮಾದಕ ದ್ರವ್ಯ ಗಳನ್ನು ಬಳಸುವವರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಲೇ ಇದೆ ಎಂದು ಅವರು ಖೇಧ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ.ವಿ.ಭಂಡಾರಿ ಮಾತನಾಡಿ, ಜಗತ್ತಿನಲ್ಲಿ ಇಂದು 35 ಮಿಲಿಯನ್ ಮಂದಿ ಮಾದಕ ದ್ರವ್ಯ ವ್ಯಸನಿಗಳು ಇದ್ದಾರೆ. 11 ಮಿಲಿಯನ್ ಮಂದಿ ಚುಚ್ಚುಮದ್ದಿನ ಮೂಲಕ ಮಾದಕ ದ್ರವ್ಯ ಸೇವಿಸುತ್ತಿದ್ದಾರೆ. ಹೀಗೆ ಅಫೀಮು ಸೇವಿಸುವ ಮೂರನೆ ಎರಡರಷ್ಟು ಮಂದಿ ಸಾನ್ನಪ್ಪುತ್ತಿದ್ದಾರೆ ಎಂದು ತಿಳಿಸಿದರು.

ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗುವವರಲ್ಲಿ ಶೇ.33ರಷ್ಟು ಮಂದಿ ಮದ್ಯ ವ್ಯಸನಿಗಳಾಗಿರುತ್ತಾರೆ. ಮಾದಕ ದ್ರವ್ಯಗಳು ಅಪರಾಧ ಕೃತ್ಯ ಎಸಗಲು ಹೆಚ್ಚು ಪ್ರೇರಿಸುತ್ತದೆ. ವೈದ್ಯರು, ಔಷಧ ಮಾರಾಟಗಾರರು ಹಾಗೂ ನರ್ಸ್‌ಗಳು ಮಾದಕ ವಸ್ತುಗಳ ವ್ಯಸನಕ್ಕೆ ಕಾರಣಕರ್ತರಾಗುತ್ತಿದ್ದಾರೆ. ಇವರಿಗೆ ಸುಲಭವಾಗಿ ಸಿಗುವ ಈ ಔಷಧಗಳು ವ್ಯಸನಕ್ಕೆ ಬಳಕೆಯಾಗುತ್ತದೆ ಎಂದು ಅವರು ಆರೋಪಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮಾನಸಿಕ ತಜ್ಞ ಡಾ.ಮಾನಸ, ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು. ಆಸ್ಪತ್ರೆಯ ನಾಗೇಶ್ ಸೋಮಯಾಜಿ ಸ್ವಾಗತಿಸಿದರು. ಮನಶಾಸ್ತ್ರಜ್ಞ ನಾಗರಾಜ್ ಮೂರ್ತಿ ವಂದಿಸಿದರು. ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News