ಹೊಸ ಶಿಕ್ಷಣ ನೀತಿ ಸಂವಿಧಾನ ಮೌಲ್ಯ ಎತ್ತಿ ಹಿಡಿಯಲಿ: ಪ್ರೊ.ಪಿ.ಎಸ್.ಯಡಪಡಿತ್ತಾಯ ಸಲಹೆ

Update: 2019-06-26 14:35 GMT

ಮಂಗಳೂರು, ಜೂ.26: ನೂತನವಾಗಿ ಜಾರಿಗೆ ಬರಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ನ್ಯಾಯ, ಸ್ವಾತಂತ್ರ, ಸಮಾನತೆ, ಭ್ರಾತೃತ್ವ ರಕ್ಷಿಸುವುದಷ್ಟೇ ಸಾಲದು, ಸಂವಿಧಾನದ ವೌಲ್ಯಗಳನ್ನು ಎತ್ತಿ ಹಿಡಿಯುವಂತಿರಬೇಕು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಸಲಹೆ ನೀಡಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು, ಶಿಕ್ಷಣ ರಕ್ಷಣಾ ವೇದಿಕೆ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2019 (ಕರಡು) ಕುರಿತ ಸಾರ್ವಜನಿಕ ಸಮಾಲೋಚನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೂತನ ಶಿಕ್ಷಣ ನೀತಿಯು ಸಾಂವಿಧಾನಿಕ ಆಶಯಗಳನ್ನು ಈಡೇರಿದುವುದು ಮುಖ್ಯವಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸಂವಿಧಾನ ಮೌಲ್ಯದ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕು. ಒಳ್ಳೆಯ ನೀತಿ ನಿಯಮಗಳನ್ನು ಅನುಷ್ಠಾನಕ್ಕೆ ತರಲು ವಿಶ್ವವಿದ್ಯಾನಿಲಯಗಳ ಕುಲಪತಿಗಳು ಪೂರಕ ವಾತಾವರಣ ನಿರ್ಮಿಸಿದರೆ ಸಾಲದು, ಜನಸಾಮಾನ್ಯರು ಪಾಲ್ಗೊಳ್ಳಬೇಕು ಎಂದು ಒತ್ತಾಯಿಸಿದರು.

ಭಾರತ ದೇಶವು ಒಂದು ಕಂಬದಿಂದ ಕೂಡಿಲ್ಲ; ಇದು ಸಾವಿರ ಕಂಬಗಳ ಚಪ್ಪರವಾಗಿದೆ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮನಸನ್ನು ಅರ್ಥ ಮಾಡಿಕೊಳ್ಳಬೇಕು. ಇಂತಹ ಸನ್ನಿವೇಶದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕಾರ್ಯವಿಧಾನದ ಬಗ್ಗೆ ಎಲ್ಲರೂ ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.

ಹೆಚ್ಚು ಶಿಕ್ಷಣ ಪಡೆದವರ ಬುದ್ಧಿ ಅನರ್ಥವಾಗಿದೆ. ವಿದ್ಯೆ ಮತ್ತು ಬುದ್ಧಿ ಜೊತೆಯಾಗಿ ಮುಂದುವರಿಯಲು ಸಾಧ್ಯವಿಲ್ಲವೇ ಎನ್ನುವುದನ್ನು ವಿಮರ್ಷಿಸಬೇಕಿದೆ. ಈ ಮೊದಲಿನ ರಾಷ್ಟ್ರೀಯ ಶಿಕ್ಷಣ ನೀತಿಗಳು ಆಮೂಲಾಗ್ರವಾಗಿ ಬದಲಾವಣೆಯಾಗಬೇಕು. ನೂತನ ಶಿಕ್ಷಣ ನೀತಿಯಲ್ಲಿನ ಗೊಂದಲಗಳು ನಿವಾರಣೆಯಾಗಬೇಕು, ಸಮಸ್ಯೆಗಳು ಪರಿಹಾರವಾಗಬೇಕಾದರೆ ಸಾರ್ವಜನಿಕರೂ ಅಭಿಪ್ರಾಯ, ಸಲಹೆ ನೀಡುವ ಅಗತ್ಯವಿದೆ ಎಂದರು.

ಅಭಿವೃದ್ಧಿಯ ಮೂಲಸೆಲೆ ಶಿಕ್ಷಣ: ‘ಸದ್ಯ ಕರಡು ಹಂತದಲ್ಲಿರುವ ರಾಷ್ಟ್ರೀಯ ಶಿಕ್ಷಣ ನೀತಿ 2019 ಕಾಯ್ದೆಯು ದೇಶದ ಮೂರನೇ ಕಾಯ್ದೆಯಾಗಿದೆ. ಈ ಮೊದಲು 1968, 1986 (1992-ಪರಿಷ್ಕೃತ) ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿತ್ತು. ಹಳೆಯ ಶಿಕ್ಷಣ ನೀತಿಯಲ್ಲಿನ ಸಮಸ್ಯೆ, ಗೊಂದಲಗಳನ್ನು ಪರಿಹರಿಸಲು 484 ಪುಟಗಳ 2019ರ ಶಿಕ್ಷಣ ನೀತಿಯಲ್ಲಿ ಪ್ರಯತ್ನಿಸಿರುವುದು ಕಾಣುತ್ತದೆ. ಶಿಕ್ಷಣ ಮೂಲಭೂತ ಹಕ್ಕಾಗಿದೆ. ಎಲ್ಲ ಅಭಿವೃದ್ಧಿಗಳ ಮೂಲಸೆಲೆ ಶಿಕ್ಷಣವಾಗಿದೆ’ ಎಂದು ಸಾಮಾಜಿಕ ಚಿಂತಕ ಲೋಲಾಕ್ಷ ಅಭಿಪ್ರಾಯಪಟ್ಟರು.

ಇಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಧರ್ಮಗಳ ಬಣ್ಣ ಲೇಪಿಸಲಾಗುತ್ತಿದೆ. ಜಾತಿ, ಧರ್ಮಗಳ ಹೆಸರಲ್ಲಿ ಕೊಲೆ, ಹಲ್ಲೆ, ಥಳಿತ ಅವಘಡಗಳು ಸಂಭವಿಸುತ್ತಿರುವ ಇಂತಹ ಸಂದರ್ಭದಲ್ಲಿ ಈ ಹೊಸ ಶಿಕ್ಷಣ ನೀತಿಯನ್ನು ಯಾವ ನೆಲೆಯಲ್ಲಿ ಸ್ವೀಕರಿಸುತ್ತೇವೆ ಎನ್ನುವುದು ಪ್ರಾಧಾನ್ಯತೆ ಪಡೆಯುತ್ತದೆ. ದೇಶದಲ್ಲಿನ ಗಂಭೀರ ವಿಚಾರಗಳ ಬಗ್ಗೆ ಆಲೋಚಿಸುವ ಸಂದರ್ಭ ಬಂದಿದೆ. ಎಲ್ಲರೂ ಸಮಾನವಾಗಿ ಭಾಗವಹಿಸಿ ಸಲಹೆ, ಸೂಚನೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ನವಭಾರತ ಸೃಷ್ಟಿ: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಿಕ್ಷಣ, ಅಂಗನವಾಡಿಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಜತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯವಹಾರಕ್ಕೆ ಕಡಿವಾಣ ಹಾಕುವ ಬಗ್ಗೆ ಕರಡು ಪ್ರತಿಯಲ್ಲಿ ವಿವರಿಸಲಾಗಿದೆ. ಇದು ಎಲ್ಲರನ್ನು ಒಳಗೊಳ್ಳುವ ಶಿಕ್ಷಣ ನೀತಿಯಾಗಿದೆ. ಸಣ್ಣಪುಟ್ಟ ಗೊಂದಲ ಸರಿಪಡಿಸಿಕೊಂಡು ಜಾರಿಗೆ ಬಂದಲ್ಲಿ 10ರಿಂದ 15 ವರ್ಷಗಳಲ್ಲಿ ನವಭಾರತ ಸೃಷ್ಟಿಯಾಗಲಿದೆ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಪಿ.ಎಲ್. ಧರ್ಮ ಹೇಳಿದರು.

ಮಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಜಾತಿಆಧರಿತವಾಗಿ ಹುಟ್ಟಿಕೊಳ್ಳುತ್ತಿವೆ. ಸಂಸ್ಥೆಗಳಿಂದ ವಿದ್ಯಾರ್ಥಿಗಳು ಹೊರಬರುವಾಗ ಧಾರ್ಮಿಕ ಮನಸ್ಥಿತಿಯಿಂದಲೇ ಬರುವಂತಹ ವಿಷಮಸ್ಥಿತಿ ಎದುರಾಗಿದೆ. ನೂತನ ಶಿಕ್ಷಣ ನೀತಿಯಲ್ಲಿ ಇಂತಹ ಪ್ರಯತ್ನಕ್ಕೆ ತಡೆಬೀಳಲಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿಗದಿತ ಫಲಿತಾಂಶ ನೀಡುವ ಟಾರ್ಗೆಟ್ ನೀಡಲಾಗುತ್ತಿದೆ. ಫಲಿತಾಂಶ ನೀಡುವಲ್ಲಿ ವಿಫಲವಾದರೆ ಸಂಸ್ಥೆಗಳು ಮನೆದಾರಿ ಹಿಡಿಯುವ ಪರಿಸ್ಥಿತಿ ಬರಲಿದೆ ಎಂದರು.

ಶಿಕ್ಷಕ ಕೇಂದ್ರಿತ ವ್ಯವಸ್ಥೆ: ಹಳೆಯ ಶಿಕ್ಷಣ ನೀತಿಗಳಲ್ಲಿ ವಿದ್ಯಾರ್ಥಿ ಕೇಂದ್ರಿತ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಬದಲಾದ ದಿನಮಾನಗಳಲ್ಲಿ ಪ್ರತೀ ಶಿಕ್ಷಕ ತನ್ನ ಜವಾಬ್ದಾರಿ ನಿರ್ವಹಿಸಿದರೆ ಸಮಸ್ಯೆ ಉದ್ಭವಿಸದು. ನೂತನ ಶಿಕ್ಷಣ ನೀತಿಯಲ್ಲಿ ಶಿಕ್ಷಕ ಕೇಂದ್ರಿತ ವ್ಯವಸ್ಥೆಯಾಗಿ ಮಾರ್ಪಡಲಿದೆ. ಇದು ಎಲ್ಲರನ್ನೂ ಒಳಗೊಳ್ಳುವ ಕಲ್ಪನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ‘ಪಡಿ’ ನಿರ್ದೇಶಕ ರೆನ್ನಿ ಡಿಸೋಜ, ಡಾ.ನಾಗವೇಣಿ ಎನ್., ಡಾ.ವಿಶ್ವನಾಥ, ಡಾ.ಇಸ್ಮಾಯಿಲ್ ಎನ್., ಡಾ.ರಾಜ್‌ಮೋಹನ್ ಬಿ. ವಿಷಯಗಳನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ‘ಅಕ್ಷರಗಳ ಸಂತ’ ಹಾಜಬ್ಬ, ಪೌರಕಾರ್ಮಿಕ ಮಹಿಳೆ ಪುಷ್ಪಾ, ಸಾಮಾಜಿಕ ಕಾರ್ಯಕರ್ತರಾದ ಪದ್ಮನಾಭ ನರಿಂಗಾನ, ಮುಗಳಿ ಕೊರಗ ಅವರು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರನ್ನು ಶಾಲು ಹೊದಿಸಿ, ಸನ್ಮಾನಿಸಿದರು.

ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷೆ ಪ್ರೇಮಿ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವತ್ಸಲಾ ನಾಯ್ಕ ಪ್ರಾರ್ಥಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಉದಯಕುಮಾರ್ ಎಂ.ಎ. ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News