ಮಂಗಳೂರು: ಹಸಿ-ಒಣಕಸ ವಿಂಗಡಣೆ ಮಾಡಲು ಪಾಲಿಕೆ ಮನವಿ

Update: 2019-06-26 14:36 GMT

ಮಂಗಳೂರು, ಜೂ.26: ಮಂಗಳೂರು ನಗರ ವ್ಯಾಪ್ತಿಯಲ್ಲಿ ದಿನನಿತ್ಯ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಹಸಿಕಸ ಹಾಗೂ ಒಣಕಸವಾಗಿ ವಿಂಗಡಿಸಿ ಮಹಾನಗರ ಪಾಲಿಕೆಯಿಂದ ಮಾಡಲಾಗಿರುವ ಸಂಗ್ರಹಣಾ ವ್ಯವಸ್ಥೆಗೆ ನೀಡುವಂತೆ ವಿನಂತಿಸಲಾಗಿದೆ.

ಜುಲೈ 1ರಿಂದ ವಾರದ ಎಲ್ಲ ದಿನಗಳು (ಶುಕ್ರವಾರ ಹೊರತುಪಡಿಸಿ) ಹಸಿ ಕಸವನ್ನು ಸಂಗ್ರಹಿಸಲಾಗುವುದು ಹಾಗೂ ಶುಕ್ರವಾರದಂದು ಒಣಕಸವನ್ನು ಮಾತ್ರ ಸಂಗ್ರಹಿಸಲಾಗುವುದು. ಮಂಗಳೂರು ಮಹಾನಗರ ಪಾಲಿಕೆಯು ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ 2016ನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಿದೆ.

ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ 2016ರಂತೆ ಪ್ರತಿ ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಬೇಕು. ಘನತ್ಯಾಜ್ಯವನ್ನು ವಿಂಗಡಣೆ ಮಾಡಿ ನಿಗಿದಿತ ದಿನದಂದು ಹಸಿಕಸ ಮತ್ತು ಒಣಕಸ ಪ್ರತ್ಯೇಕವಾಗಿ ನೀಡದಿದ್ದಲ್ಲಿ ಮಹಾನಗರ ಪಾಲಿಕೆಯಿಂದ ಕಸ ಸಂಗ್ರಹಣೆಯನ್ನು ಸ್ವೀಕರಿಸಲಾಗುವುದಿಲ್ಲ.

ರಸ್ತೆಬದಿ ತ್ಯಾಜ್ಯ ಬಿಸಾಡುವವರಿಗೆ ರಾಜ್ಯ ಪೌರ ನಿಗಮ ಅಧಿನಿಯಮ 1976 ಹಾಗೂ ಮಹಾನಗರ ಪಾಲಿಕೆಯ ನೈರ್ಮಲೀಕರಣ ಮತ್ತು ಘನತ್ಯಾಜ್ಯ ವಸ್ತುಗಳ ಬೈಲಾ 2018ರ ಪ್ರಕಾರ 100ರಿಂದ 25 ಸಾವಿರ ರೂ.ವರೆಗೆ ದಂಡ ವಿಧಿಸಲು ಕ್ರಮ ವಹಿಸಲಾಗುವುದು.

ನಿಷೇಧಿತ ಪ್ಲಾಸ್ಟಿಕ್ ಬಳಕೆ ಅಥವಾ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸತಕ್ಕದ್ದು, ತಪ್ಪಿದಲ್ಲಿ ದಂಡ ಸಹಿತ ವಶಪಡಿಸಲಾಗುವುದು. ಜತೆಗೆ ಪ್ರಾಧಿಕಾರದಲ್ಲಿ ಕೇಸು ದಾಖಲಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News