‘ಡಾ.ಚೌಟ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ’

Update: 2019-06-26 14:40 GMT

ಮಂಗಳೂರು, ಜೂ. 26: ಡಾ.ಕೃಷ್ಣಾನಂದ ಚೌಟರು ಆನಂದಕೃಷ್ಣ ಕಾವ್ಯನಾಮದ ಮೇರು ವ್ಯಕ್ತಿತ್ವದ ಅಸಾಧಾರಣ ಬರಹಗಾರ. ವಾಕ್‌ಚತುರರೂ, ಉದಾರರೂ ಆಗಿದ್ದ ಅವರು ಹಿರಿತನವನ್ನು ಆರ್ಜಿಸಿಕೊಂಡವರು. ಸಂಸ್ಕೃತಿ ಮತ್ತು ಕೃಷಿ ಎರಡನ್ನೂ ಸಮನ್ವಯ ಗೊಳಿಸಿದವರು. ಲಲಿತ ಕಲೆಗಳ ವಿವಿಧ ಪ್ರಾಕಾರಗಳಲ್ಲಿ ಕೈಯಾಡಿಸಿದ ಬಹುಮುಖ ಪ್ರತಿಭೆಯ ಡಾ.ಚೌಟರ ಅಗಲುವಿಕೆ ನಿಜ ಅರ್ಥದಲ್ಲಿ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ವಿದ್ವಾಂಸ ಡಾ.ರಮಾನಂದ ಬನಾರಿ ಹೇಳಿದರು.

ಮಂಜೇಶ್ವರದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕದ ‘ಗಿಳಿವಿಂಡು’ ಸೌಧದಲ್ಲಿ ನಡೆದ ಡಾ.ಡಿ.ಕೆ. ಚೌಟ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.

ಟ್ರಸ್ಟ್‌ನ ಸದಸ್ಯ ಸುಭಾಶ್ಚಂದ್ರ ಕಣ್ವತೀರ್ಥ ಮಾತನಾಡಿ, ಗೋವಿಂದ ಪೈ ಸ್ಮಾರಕದ ನಿರ್ಮಾಣದ ನಾಯಕ ಡಾ.ವೀರಪ್ಪ ಮೊಯಿಲಿ ಅವರೊಂದಿಗೆ ದುಡಿದು, ಸ್ಮಾರಕದ ಆಡಳಿತ ನಿರ್ದೇಶಕರಾಗಿ ಸಂಸ್ಥೆಗೆ ಹಣಕಾಸಿನ ನೆರವನ್ನೂ ನೀಡುತ್ತಾ ಉದಾರ ದಾನಿಗಳಾಗಿ ದುಡಿದ ವರ್ಚಸ್ವಿ ಡಾ. ಚೌಟರ ಸೇವೆ ಅವಿಸ್ಮರಣೀಯ ಎಂದರು.

ಸಾರಸ್ವತ ಲೋಕಕ್ಕೆ ಅವರು ನೀಡಿದ ತುಳುವಿನ ಉತ್ಕೃಷ್ಟ ಕೃತಿಗಳಾದ ‘ಮಿತ್ತಬೈಲ್ ಯಮುನಕ್ಕ’ ಮತ್ತು ‘ಕರಿಯಜ್ಜೆರೆನ ಕತೆಕುಲು’ ಪರಿಣಾಮಕಾರಿ ಬರಹಗಳು. ಸ್ನಾತಕೋತ್ತರ ತುಳು ವಿದ್ಯಾರ್ಥಿಗಳಿಗೆ ಅಧ್ಯಯನ ಯೋಗ್ಯವಾದುದು ಎಂದು ಹೇಳಿದರು.

ಟ್ರಸ್ಟ್‌ನ ಕೋಶಾಧಿಕಾರಿ ಬಿ.ವಿ. ಕಕ್ಕಿಲಾಯ ಮಾತನಾಡಿದರು. ಟ್ರಸ್ಟ್‌ನ ಆಡಳಿತಾಧಿಕಾರಿ ಡಾ. ಕಮಲಾಕ್ಷ ಸ್ವಾಗತಿಸಿ, ವಂದಿಸಿದರು. ಸಹಾಯಕ ಅಧಿಕಾರಿ ಸುಬ್ರಹ್ಮಣ್ಯ, ಶ್ರೀಮತಿ ವಿ. ಕಕ್ಕಿಲಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News