ಪುಲ್ವಾಮ ದಾಳಿಗೆ ಬೇಹುಗಾರಿಕಾ ವೈಫಲ್ಯ ಕಾರಣವಲ್ಲ: ಕೇಂದ್ರ ಸರಕಾರ

Update: 2019-06-26 15:21 GMT

 ಹೊಸದಿಲ್ಲಿ,ಜೂ.26: ಈ ವರ್ಷದ ಫೆಬ್ರವರಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಪುಲ್ವಾಮ ದಾಳಿ ಘಟನೆಗೆ ಯಾವುದೇ ಬೇಹುಗಾರಿಕಾ ವೈಫಲ್ಯವುಂಟಾಗಿರುವುದನ್ನು ಕೇಂದ್ರ ಸರಕಾರವು ಬುಧವಾರ ನಿರಾಕರಿಸಿದೆ.

ಪುಲ್ವಾಮ ದಾಳಿ ಯಾವುದೇ ಬೇಹುಗಾರಿಕಾ ವೈಫಲ್ಯ ಕಾರಣವಲ್ಲವೆಂದು ಕೇಂದ್ರ ಗೃಹ ಸಚಿವಾಲಯದ ಸಹಾಯಕ ಸಚಿವ ಜಿ. ಕಿಶನ್ ರೆಡ್ಡಿ ಲೋಕಸಭೆಗೆ ತಿಳಿಸಿದ್ದಾರೆ.

    ಪುಲ್ವಾಮ ದಾಳಿ ಘಟನೆಯಲ್ಲಿ ಬೇಹುಗಾರಿಕಾ ವೈಫಲ್ಯವುಂಟಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಿರಣ್ ರೆಡ್ಡಿ ‘‘ ಜಮ್ಮುಕಾಶ್ಮೀರವು ಕಳೆದ ಮೂರು ದಶಕಗಳಿಂದ ಪ್ರಾಯೋಜಿತ ಭಯೋತ್ಪಾದನೆಯಿಂದ ಪೀಡಿತವಾಗಿದ್ದು, ಅದಕ್ಕೆ ಗಡಿಯಾಚೆಯಿಂದ ಬೆಂಬಲ ದೊರೆಯುತ್ತಿದೆ. ಆದಾಗ್ಯೂ, ಭಯೋತ್ಪಾದನೆಯ ಬಗ್ಗೆ ಸರಕಾರದ ಶೂನ್ಯ ಸಹಿಷ್ಣುತೆಯ ನೀತಿ ಹಾಗೂ ಭದ್ರತಾ ಪಡೆಗಳ ಅವಿರತ ಕಾರ್ಯಾಚರಣೆಯಿಂದಾಗಿ, ಕಳೆದ ಕೆಲವು ವರ್ಷಗಳಲ್ಲಿ ಭಾರೀ ಸಂಖ್ಯೆಯ ಭಯೋತ್ಪಾದಕರನ್ನು ತಟಸ್ಥಗೊಳಿಸ ಲಾಗಿದೆ’’ ಎಂದರು.

    ‘‘ ಜಮ್ಮುಕಾಶ್ಮೀರದಲ್ಲಿ ಎಲ್ಲಾ ಏಜೆನ್ಸಿಗಳು ಸಮನ್ವಯತೆಯೊಂದಿಗೆ ಕೆಲಸ ಮಾಡುತ್ತಿವೆ ಹಾಗೂ ಗುಪ್ತಚರ ಮಾಹಿತಿಗಳನ್ನು ಸಕಾಲದಲ್ಲಿ ವಿವಿಧ ಏಜೆನ್ಸಿಗಳ ನಡುವೆ ಹಂಚಿಕೊಳ್ಳ ಲಾಗುತ್ತದೆ. ಪುಲ್ವಾಮ ದಾಳಿ ಬಗ್ಗೆ ಈವರೆಗೆ ಎನ್‌ಐಎ ನಡೆಸಿದ ತನಿಖೆಯಿಂದಾಗಿ ಸಂಚುಕೋರರು, ಆತ್ಮಹತ್ಯಾ ದಾಳಿಕೋರ ಹಾಗೂ ದಾಳಿಗೆ ಬಳಸಲಾದ ವಾಹನವನ್ನು ಪೂರೈಕೆ ಮಾಡಿದಾತನನ್ನು ಗುರುತಿಸಲು ಸಾಧ್ಯವಾಗಿದೆ’’ ಎಂದರು.

           ಈ ವರ್ಷದ ಫೆಬ್ರವರಿ 14ರಂದು ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಮಂದಿ ಯೋಧರು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News