ಬಂಟ್ವಾಳ: ಬಸ್‍ಗಳಿಗೆ ಕಲ್ಲೆಸೆತ ಪ್ರಕರಣ; ಮೂವರು ಆರೋಪಿಗಳು ಸೆರೆ

Update: 2019-06-26 17:54 GMT

ಮಂಗಳೂರು, ಜೂ. 26: ಬಂಟ್ವಾಳ ನಗರ ಮತ್ತು ಪುತ್ತೂರು ನಗರ ಠಾಣೆಗಳ ವ್ಯಾಪ್ತಿಯಲ್ಲಿ ಬಸ್‌ಗಳ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ವೀರಕಂಭ ಮಂಗಳಪದವು ನಿವಾಸಿ ಗುರುಪ್ರಸಾದ್ ಕೊರಗ(20), ಕುಳಗ್ರಾಮ ಕಾರ್ಯಾಡಿಮನೆ ನಿವಾಸಿ ಪುನೀತ್ ಪೂಜಾರಿ (20), ಬಂಟ್ವಾಳ ತಾಲೂಕಿನ ಕೇಪುಗ್ರಾಮ ಮೈರಾ ನಿವಾಸಿ ಕಿರಣ್‌ರಾಜ್ ಬೆಳ್ಚಡ (24) ಬಂಧಿತ ಆರೋಪಿಗಳು. ಇನ್ನಿತರ ಆರೋಪಿಗಳ ಬಂಧನಕ್ಕೆ ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ವಿವರ

ಜೂ. 24ರಂದು ಸಂಜೆ ಬಂಟ್ವಾಳ ನಗರ ಮತ್ತು ಜೂ. 25ರಂದು ಪುತ್ತೂರು ನಗರ ಠಾಣೆಗಳ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳಿಗೆ ಕಲ್ಲು ತೂರಾಡಿ, ಗಾಜು ಒಡೆದಿದ್ದರು. ಇಬ್ಬರು ಚಾಲಕರು ಮತ್ತು ಮೂರು ವಿದ್ಯಾರ್ಥಿನಿಯರು ಅವಘಡದಲ್ಲಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಠಾಣೆಗಳಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿದ್ದವು. ದುಷ್ಕರ್ಮಿಗಳ ಪತ್ತೆ ಬಗ್ಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ವಿಶೇಷ ತಂಡಗಳನ್ನು ರಚಿಸಿದ್ದರು.

ತನಿಖೆ ನಡೆಸಿದ ಪೊಲೀಸ್ ವಿಶೇಷ ತಂಡದ ವಿಟ್ಲ ಪೊಲೀಸರು, ವಿಟ್ಲ ಪೊಲೀಸ್ ಠಾಣೆಯ ನಾಲ್ಕು ಹಾಗೂ ಪುತ್ತೂರು ಪೊಲೀಸ್ ಠಾಣೆಯ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಗಳಲ್ಲಿ ಬಂಧಿತ ಆರೋಪಿಗಳ ಹಲವು ಸಹಚರರ ಬಂಧಿಸುವ ಬಗ್ಗೆ ತನಿಖಾ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಂತಿಭಂಗಕ್ಕೆ ಸಂಚು

ಜೂ.24ರಂದು ಕೇರಳ ಬದಿಯಡ್ಕ ಠಾಣಾ ವ್ಯಾಪ್ತಿಯ ಎಣ್ಮಕಜೆ ಎಂಬಲ್ಲಿ ದನ ಸಾಗಾಟ ತಡೆದು ಹಲ್ಲೆ ನಡೆಸಿ, ದರೋಡೆ ಮಾಡಿರುವ ವಿಚಾರದಲ್ಲಿ ಅಕ್ಷಯ್ ರಜಪೂತ್ ಮತ್ತು ಆತನ ಸಂಗಡಿಗರ ವಿರುದ್ಧ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಇದರಿಂದ ಆಕ್ರೋಶಗೊಂಡ ಆರೋಪಿಗಳ ಗುಂಪು ವಿಟ್ಲ ಬಂದ್ ನಡೆಸುವ ನೆಪದಲ್ಲಿ ಶಾಂತಿಭಂಗ ಮಾಡಲು ಸಂಚು ಮಾಡಿದ್ದರು. ಇದರ ಪರಿಣಾಮವಾಗಿ ಈ ಕೃತ್ಯ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಟ್ವಾಳ ಮತ್ತು ಪುತ್ತೂರು ಸೇರಿದಂತೆ ವಿವಿಧೆಡೆ ಬಸ್‌ಗಳಿಗೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ವಿಚಾರಣೆ ನಡೆಸಲಾಗಿದೆ. ಬುಧವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಇನ್ನು ಹಲವು ಆರೋಪಿಗಳ ಸುಳಿವು ದೊರೆತಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು.
- ಲಕ್ಷ್ಮೀಪ್ರಸಾದ್,
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News