ಮಾದಕ ದ್ರವ್ಯ ವಿರುದ್ಧದ ಕಾನೂನು ಕಠಿಣಗೊಳಿಸಿ: ಡಾ.ವಿನೋದ್ ಭಟ್

Update: 2019-06-26 15:30 GMT

ಮಣಿಪಾಲ, ಜೂ. 26: ಮಾದಕ ದ್ರವ್ಯಗಳ ಸೇವನೆ ಹಾಗೂ ಬಳಕೆ ದೇಶದ ಯುವಜನರಲ್ಲಿ ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕೆ ಅವುಗಳ ಡೀಲರ್‌ಗಳು ಹಾಗೂ ಮಾರಾಟಗಾರರ ಮೇಲೆ ಇನ್ನಷ್ಟು ಕಠಿಣ ಕಾನೂನುಕ್ರಮಗಳನ್ನು ಕೈಗೊಳ್ಳುವಂತೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ನ (ಮಾಹೆ) ಕುಲಪತಿ ಡಾ.ಎಚ್.ವಿನೋದ್ ಭಟ್ ಹೇಳಿದ್ದಾರೆ.

ಮಾಹೆಯ ಮಾದಕ ದ್ರವ್ಯ ಹಾಗೂ ಮಾನಸಿಕ ವಸ್ತುಗಳ ಕೇಂದ್ರದ ವತಿಯಿಂದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಬುಧವಾರ ಮಣಿಪಾಲ ಕೆಎಂಸಿಯ ಇಂಟರ್ಯಾಕ್ಟ್ ಕಟ್ಟಡದಲ್ಲಿ ಆಯೋಜಿ ಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಾದಕ ದ್ರವ್ಯ ವ್ಯಸನ ಎಂಬುದು ಇಂದು ವಿಶ್ವದಾದ್ಯಂತ, ಸಾಂಕ್ರಾಮಿಕ ರೀತಿಯಲ್ಲಿ ಹಬ್ಬಿರುವ ಒಂದು ವ್ಯಸನವಾಗಿದೆ. ಪೆಟ್ರೋಲ್ ಮತ್ತು ಶಸ್ತ್ರಾಸ್ತ್ರ ಉದ್ಯಮಗಳ ಬಳಿಕ ವಿಶ್ವದ ಮೂರನೇ ಅತ್ಯಂತ ದೊಡ್ಡ ವ್ಯವಹಾರವೂ ಇದಾಗಿದೆ. ಇದರ ಒಟ್ಟು ವ್ಯವಹಾರ ಈಗ ಟ್ರಿಲಿಯನ್ ಡಾಲರ್‌ನ್ನು ದಾಟಿದೆ ಎಂದು ಡಾ.ಭಟ್ ವಿವರಿಸಿದರು.

ಭಾರತದಲ್ಲೂ ಈ ವ್ಯಸನ ವ್ಯಾಪಕವಾಗಿ ಹಬ್ಬಿದೆ. ಇದರ ನಿಯಂತ್ರಣಕ್ಕೆ ಇವುಗಳ ಡೀಲರ್‌ಗಳು ಹಾಗೂ ಮಾರಾಟಗಾರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ನಿಯಂತ್ರಿಸಬೇಕು. ಆದರೆ ಇದಕ್ಕೆ ಬಲಿಪಶುವಾಗು ವವರ ಬಗ್ಗೆ ಮಾನವೀಯತೆಯಿಂದ ನಡೆದುಕೊಂಡು ಅವರನ್ನು ಅದರಿಂದ ಬಿಡಿಸಿ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದರು.

ಯುವಜನತೆ ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗದಂತೆ ಈ ಬಗ್ಗೆ ಸಮಾಜ ದಲ್ಲಿ ಜಾಗೃತಿಯನ್ನು ಮೂಡಿಸಬೇಕು. ಅದಕ್ಕೆ ಬಲಿಯಾದವರ ಬಗ್ಗೆ ವಿದ್ಯಾಸಂಸ್ಥೆ ಗಳು ಹಾಗೂ ಸಮಾಜ ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ಮಾದಕ ದ್ರವ್ಯ ವ್ಯಸನದ ಕುರಿತಂತೆ ಮಂಗಳೂರಿನ ನ್ಯೂಸ್ ಕರ್ನಾಟಕ ಟಿವಿ ಚಾನೆಲ್ ತಯಾರಿಸಿರುವ ಧಾರಾವಾಹಿಯನ್ನು ಉದ್ಘಾಟಿಸಿ ಮಾತನಾಡಿ, ದೇಶದ ಅಭಿವೃದ್ಧಿಗೆ ಮಾರಕವಾದ ಮಾದಕದ್ರವ್ಯ ಇಂದು ಯುವಜನತೆಯ ಮೇಲೆ ವಿಶೇಷ ಪರಿಣಾಮ ಬೀರುತ್ತಿದೆ. ಮಾದಕ ವಸ್ತುವಿಗೆ ಬಲಿಯಾಗುವವರಲ್ಲಿ ಯುವಜನತೆಗೆ ಸಂಖ್ಯೆ ಅಧಿಕವಿದೆ ಎಂದರು.

ಮಾದಕದ್ರವ್ಯ ಕೆಲವರಿಗೆ ಖುಷಿ, ಸಂತೋಷ ನೀಡುವ, ಇನ್ನು ಕೆಲವರಿಗೆ ಆತ್ಮವಿಶ್ವಾಸ ಹೆಚ್ಚಿಸುವ ವಸ್ತುವಾಗಿದೆ. ಸಮಾಜದ ಒಂದು ವರ್ಗಕ್ಕೆ ಅದೀಗ ಜೀವನಶೈಲಿಯ ಒಂದು ರೀತಿ ಎನಿಸಿಕೊಂಡಿದೆ. ಕೆಲವರಲ್ಲಿ ನೋವು ನಿವಾರಕಗಳ ಮೂಲಕ ಪ್ರಾರಂಭಗೊಳ್ಳುವ ಇವುಗಳ ಸೇವನೆ, ಹಲವು ಹಂತಗಳನ್ನು ದಾಟಿ ಗಾಂಜಾದವರೆಗೂ ಸಾಗಬಹುದು. ವಿದ್ಯಾರ್ಥಿಗಳಲ್ಲಿ ಕುತೂಹಲ, ತಮಾಷೆ, ಕೆಲವೊಮ್ಮೆ ಫ್ಯಾಶನ್‌ಗಾಗಿ ಪ್ರಾರಂಭಗೊಂಡು, ನಿಧಾನವಾಗಿ ಚಟಕ್ಕೆ ತಿರುಗಿ ಅಭ್ಯಾಸವಾಗಿ ಬದಲಾಗುತ್ತದೆ. ಇದರಿಂದ ಆತನ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಇಡೀ ಜೀವನದ ಮೇಲೆ ಅದು ುಷ್ಪರಿಣಾಮ ಬೀರುತ್ತದೆ ಎಂದರು.

ಮಾದಕ ದ್ರವ್ಯಗಳು ಅಪಘಾನಿಸ್ತಾನ, ಪಾಕಿಸ್ತಾನಗಳಲ್ಲಿ ಉತ್ಪಾದನೆಯಾಗಿ, ಕಳ್ಳಮಾರ್ಗದಲ್ಲಿ ಪಂಜಾಬ್ ಮೂಲಕ ನೇಪಾಳಕ್ಕೆ ಸಾಗಿ ಅಲ್ಲಿಂದ ಮಯಾನ್ಮಾರ್, ಬಾಂಗ್ಲಾ ಮೂಲಕ ಭಾರತವನ್ನು ಪ್ರವೇಶಿಸುತ್ತದೆ ಎಂದರು. ಮಾದಕ ದ್ರವ್ಯಗಳ ಸಾಗಾಟ, ಮಾರಾಟ ಹಾಗೂ ಸೇವನೆ ವಿರುದ್ಧ ಅತ್ಯಂತ ಕಠಿಣ ಕಾನೂನಿದೆ. ಇದರಲ್ಲಿ ಅವರಲ್ಲಿರುವ ದ್ರವ್ಯಗಳ ಪ್ರಮಾಣದ ಆಧಾರದಲ್ಲಿ ಆರು ತಿಂಗಳಿನಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆಯಿದೆ.

ಜಾಗೃತ ಸಮಾಜದಿಂದ ಮಾತ್ರ ಮಾದಕ ದ್ರವ್ಯ ವ್ಯಸನದ ನಿಯಂತ್ರಣ ಸಾದ್ಯವಿದೆ. ಈ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಇದರೊಂದಿಗೆ ಈಗಾಗಲೇ ಬಲಿಯಾದವರ ಬಗ್ಗೆ ಕಾಳಜಿಯನ್ನು ಸಮಾಜ ತೋರಿಸಬೇಕಿದೆ ಎಂದು ಕೃಷ್ಣಕಾಂತ್ ನುಡಿದರು.

ಮಾಹೆ ವಿದ್ಯಾರ್ಥಿಗಳ ಮಾದಕವಸ್ತು ವಿರೋಧಿ ಮ್ಯಾಗಜಿನ್ ‘ಪೈನಾಪಲ್ ಎಕ್ಸ್‌ಪ್ರೆಸ್’ನ್ನು ಕೆಎಂಸಿಯ ಸಹಾಯಕ ಡೀನ್ ಡಾ.ಶರತ್ ರಾವ್ ಬಿಡುಗಡೆ ಗೊಳಿಸಿದರು.ಕೆಎಂಸಿಯ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ವಿನೋದ್ ನಾಯಕ್ ಉಪಸ್ಥಿತರಿದ್ದರು.

ಕೇಂದ್ರದ ಮುಖ್ಯಸ್ಥ ಡಾ.ಜಿ.ಶ್ರೀಕುಮಾರ್ ಮೆನನ್ ಸ್ವಾಗತಿಸಿದರೆ, ಡಾ.ಗೀತಾ ಮಯ್ಯ ವಂದಿಸಿದರು. ಡಾ.ಅನಿತಾ ಎಸ್.ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News