ರೋಟರಿ ಕ್ಲಬ್ ಉಡುಪಿ-ಮಣಿಪಾಲ ವಜ್ರ ಮಹೋತ್ಸವ

Update: 2019-06-26 15:30 GMT

ಉಡುಪಿ, ಜೂ.26: 60ವರ್ಷಗಳ ಹಿಂದೆ ಪ್ರಾರಂಭಗೊಂಡ ರೋಟರಿ ಕ್ಲಬ್ ಉಡುಪಿ-ಮಣಿಪಾಲ ಇದರ ವಜ್ರ ಮಹೋತ್ಸವ ಸಮಾರಂಭ ಹಾಗೂ 2019-20ನೇ ಸಾಲಿನ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂ.28ರ ಶುಕ್ರವಾರ ಉಡುಪಿಯ ಪುರಭವನದಲ್ಲಿ ನಡೆಯಲಿದೆ ಎಂದು ವಜ್ರ ಮಹೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಎಚ್.ಶಾಂತಾರಾಮ್ ತಿಳಿಸಿದ್ದಾರೆ.

ಬುಧವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.28ರ ಸಂಜೆ 6:00ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಕಲ್ಯಾಣ ಬ್ಯಾನರ್ಜಿ ಭಾಗವಹಿಸಲಿದ್ದಾರೆ ಎಂದರು.

ಅತಿಥಿಗಳಾಗಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ, ಭಾವಿ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್, ಸಹಾಯಕ ಗವರ್ನರ್ ಡಾ.ಎ.ಗಣೇಶ್, ಡಾ.ಸೇಸಪ್ಪ ರೈ, ಚಂದ್ರ ನಾಯ್ಕಿ ಹಾಗೂ ಸತೀಶ್ ಭಾಗವಹಿಸಲಿದ್ದಾರೆ ಎಂದರು.

ಕೊಡಗಿನಲ್ಲಿ ಮನೆ ನಿರ್ಮಾಣ: 2018-19ನೇ ಸಾಲಿನಲ್ಲಿ ಅಮಿತ್ ಅರವಿಂದ್‌ಹಾಗೂ ಪ್ರಶಾಂತ್ ಹೆಗ್ಡೆ ನೇತೃತ್ವದ ತಂಡ ಎರಡು ಬೃಹತ್ ಯೋಜನೆಯನ್ನು ಜಾರಿಗೊಳಿಸಿದೆ. ಇದರಲ್ಲಿ ಕಳೆದ ವರ್ಷ ಕೊಡಗು ಪ್ರವಾಹದಲ್ಲಿ ಸಂತ್ರಸ್ಥರಾದ ಒಬ್ಬರಿಗೆ ಸಂಪೂರ್ಣ ಮನೆ ನಿರ್ಮಾಣವೂ ಸೇರಿದೆ. 5.46 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಮನೆಯನ್ನು ಕಳೆದ ವಾರ ಸಂತ್ರಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಡಾ.ಶಾಂತಾರಾಮ್ ತಿಳಿಸಿದರು.

60ಶಾಲೆಗಳಿಗೆ ಕಲಿಕಾ ಕಿಟ್: ರೋಟರಿ ಕ್ಲಬ್ ಈಗಾಗಲೇ ಉಡುಪಿ ಜಿಲ್ಲೆಯ 10 ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ 10 ಲಕ್ಷ ರೂ. ವೌಲ್ಯದ ಇ-ಶಾಲಾ ಕಲಿಕಾ ಕಿಟ್‌ಗಳನ್ನು ವಿತರಿಸಿದೆ. ಇನ್ನು 50 ಲಕ್ಷ ರೂ.ವೌಲ್ಯದ ಇ-ಶಾಲಾ ಕಲಿಕಾ ಕಿಟ್‌ಗಳನ್ನು 50 ಶಾಲೆಗಳಿಗೆ ವಿತರಿಸಲಿದೆ ಎಂದರು.

ಇದಲ್ಲದೇ ಉಡುಪಿ ಸರಕಾರಿ ಆಸ್ಪತ್ರೆಗೆ ಟಿಬಿ ಆರಂಭಿಕ ರೋಗ ನಿಯಂತ್ರಣ ಕ್ಕಾಗಿ ಜೆನ್‌ನೆಕ್ಟ್ಸ್ ಯಂತ್ರ, 112 ಮನೆಗಳಿಗೆ ಸೌರದೀಪಗಳು, ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ 120 ಹೊಲಿಗೆಯಂತ್ರಗಳನ್ನು ವಿತರಿಸಲಾಗಿದೆ. ಅಲ್ಲದೇ ರಾಜೀವ ನಗರ ಶಾಲೆಗೆ ಗ್ರಂಥಾಲಯ, ಶೌಚಾಲಯ ಹಾಗೂ ಪ್ರಯೋಗಾಲಯವನ್ನು ಒದಗಿಸಲಾಗಿದೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷರಾದ ಎಚ್.ಎನ್.ಎಸ್.ರಾವ್, ಜೈವಿಠಲ್, ರಾಜವರ್ಮ ಅರಿಗ, ಅಮಿತ್ ಅರವಿಂದ್ ಹಾಗೂ ಪ್ರಶಾಂತ್ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News