ಬಂಟ್ವಾಳ ತಾಪಂ ಸಾಮಾನ್ಯ ಸಭೆ: 'ಕಿಸಾನ್ ಯೋಜನೆಯಡಿ 13 ಸಾವಿರ ರೈತರು ನೋಂದಾವಣಿ'

Update: 2019-06-26 15:36 GMT

ಬಂಟ್ವಾಳ, ಜೂ. 26: ಬಂಟ್ವಾಳ: 23 ಕಂಗು, 2 ತೆಂಗು ಮರಗಳು, ದನದ ಕೊಟ್ಟಿಗೆಯ ಮೇಲ್ಚಾವಣಿ ಸಂಪೂರ್ಣ ಕುಸಿದಿದೆ. ಇದಕ್ಕೆ ಸಿಕ್ಕಿದ ಪರಿಹಾರ ಕೇವಲ 800 ರೂ. ಈ ಚೆಕ್ ನಗದೀಕರಿಸಲು ಆದ ವೆಚ್ಚ 710 ರೂ. ಕಂದಾಯ ಮತ್ತು ತೋಟಗಾರಿಕಾ ಇಲಾಖೆ ಪ್ರಾಕೃತಿಕ ವಿಕೋಪದಡಿ ಸಂತ್ರಸ್ಥ ಫಲಾನುಭವಿಗೆ ವಿತರಿಸುವ ಪರಿಹಾರ ಮೊತ್ತದ ದುರವಸ್ಥೆಯನ್ನು ಬುಧವಾರ ನಡೆದ ಬಂಟ್ವಾಳ ತಾಪಂನ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.

ಪ್ರಾಕೃತಿಕ ವಿಕೋಪದಿಂದ ಬೆಳೆನಾಶ, ಹಟ್ಟಿ ಹಾನಿಯಾದ ಪರಿಹಾರ ಮೊತ್ತಕ್ಕಾಗಿ ಕಚೇರಿ ಅಲೆದ ಬಳಿಕ ಕೇವಲ ಅಲ್ಪಮೊತ್ತವನ್ನು ನೀಡಲಾಗುತ್ತಿದೆ. ಸಮಸ್ಯೆ ಅನುಭವಿಸಿದವರಿಗೆ ನ್ಯಾಯೋಚಿತ ಪರಿಹಾರ ನೀಡಬೇಕು ಎಂದು ಬಂಟ್ವಾಳ ತಾಲೂಕು ಪಂಚಾಯತ್ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದ್ದಾರೆ.

ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಹೈದರ್ ಕೈರಂಗಳ, ಪರಿಹಾರದ ಮೊತ್ತವನ್ನು ಹೆಚ್ಚಿಸದೇ ಇದ್ದರೆ ಅಲ್ಪಮೊತ್ತದ ಚೆಕ್ ಹಿಡಿದುಕೊಂಡು ಏನು ಮಾಡುವುದು ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಮಮತಾ ಗಟ್ಟಿ, ತನ್ನ ಕ್ಷೇತ್ರದಲ್ಲಿ ಮೂರು ಮಂದಿಗೆ ಚೆಕ್ ವಿತರಣೆ ಆಗದೆ ವರ್ಷವೇ ಕಳೆಯಿತು ಎಂದರು.

ಸದಸ್ಯರಾದ ಪ್ರಭಾಕರ ಪ್ರಭು, ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಮತ್ತಿತರರು ಈ ವಿಷಯಕ್ಕೆ ಧ್ವನಿಗೂಡಿಸಿದರು. ಈ ಸಂದರ್ಭ ಉತ್ತರಿಸಿದ ತಹಶೀಲ್ದಾರ್ ರಶ್ಮಿ ಎಸ್.ಆರ್, ನಾವು ಸುತ್ತೋಲೆಯ ಪ್ರಕಾರವೇ ಕೆಲಸ ಮಾಡಬೇಕಾಗಿದ್ದು, ಮನಬಂದಂತೆ ದುಡ್ಡು ಕೊಡಲು ಆಗುವುದಿಲ್ಲ. ಪ್ರಾಕೃತಿಕ ವಿಕೋಪದ ಚೆಕ್‍ಗಳನ್ನು ಈ ಬಾರಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡುತ್ತಿದ್ದು, ಹಿಂದೆ ಯಾರಿಗೆ ದೊರಕಿಲ್ಲವೋ ಅದಕ್ಕೆ ಕಾರಣಗಳನ್ನು ಹುಡುಕಿ ವಿತರಿಸುವ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು.

ಕಿಸಾನ್ ಯೋಜನೆಯಡಿ 13 ಸಾವಿರ ರೈತರು ನೋಂದಾವಣಿ

ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೈತರು ನೋಂದಾವಣಿ ಮಾಡಿಕೊಳ್ಳಲು ಮನವಿ ಮಾಡಿದ ತಹಶೀಲ್ದಾರ್, ಈ ಕುರಿತು ಸದಸ್ಯರ ಅನುಮಾನಗಳಿಗೆ ಪರಿಹಾರ ನೀಡಿದರು. ಈಗಾಗಲೇ 13 ಸಾವಿರ ರೈತರು ನೋಂದಾವಣಿ ಮಾಡಿದ್ದು, ಒಟ್ಟು 53 ಸಾವಿರ ರೈತರು ಇಲ್ಲಿದ್ದಾರೆ ಎಂದರು. ಸಾರ್ವಜನಿಕರ ಉದ್ದೇಶದ ಭೂಮಿ ವಿಲೇವಾರಿಗೆ ಗರಿಷ್ಠ ಆದ್ಯತೆ ನೀಡಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ರಾಷ್ಟ್ರೀಯ ಕುಟುಂಬ ಯೋಜನೆ, ಅಂತ್ಯಸಂಸ್ಕಾರ ಯೋಜನೆಯಡಿ ಸರಕಾರದಿಂದ ಒಂದುವರೆ ವರ್ಷದದಿಂದ ಹಣಕಾಸು ಬಂದಿಲ್ಲ ಎಂದವರು ಹೇಳಿದರು.

ಕರೋಪಾಡಿ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಸೂಕ್ತ ನಿರ್ವಹಣೆ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ತಲೆದೋರಿದೆ. ಇದನ್ನು ಕಳೆದ ಬಾರಿಯೂ ಹೇಳಿದ್ದು ಯಾವುದೇ ಪರಿಹಾರ ದೊರಕಿಲ್ಲ ಎಂದು ತಾಪಂ ಸದಸ್ಯ ಉಸ್ಮಾನ್ ಕರೋಪಾಡಿ ದೂರಿದರು.

ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಡ ರೋಗಿಗಳಿಗೆ ಸಿಬ್ಬಂದಿಗಳು ಸೂಕ್ತವಾಗಿ ಚಿಕಿತ್ಸೆ ಮತ್ತು ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಸಭೆಗೆ ತಿಳಿಸಿದರು.

ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸುವ ಜಮೀನುಗಳ ಅಳತೆ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡಲು ಈಗಾಗಲೇ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದರು.

ಈ ಬಾರಿ ಗುಣಮಟ್ಟದ ಸೈಕಲ್ ವಿತರಣೆಯಾಗಿದೆ. ತಾಲೂಕಿನಲ್ಲಿ ಮೂರು ಹೈಸ್ಕೂಲುಗಳ ಪ್ರಸ್ತಾವ ಆಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಸತ್ತಿಕಲ್ಲು ಶಾಲೆಗೆ ಸಂಬಂಧಿಸಿ ಜಾಗ ಮಂಜೂರಾತಿಗೆ ಅಡೆತಡೆಗಳಿದ್ದು, ಅವನ್ನು ನಿವಾರಿಸಬೇಕು ಎಂದು ತಾಪಂ ಸದಸ್ಯ ಆದಂ ಕುಂಞಿ ತಿಳಿಸಿದರು. ಇದಕ್ಕೆ ದನಿಗೂಡಿಸಿದ ಜಿಪಂ ಸದಸ್ಯೆ ಮಂಜುಳಾ ಮಾವೆ, ತ್ವರಿತಗತಿಯಲ್ಲಿ ಕಂದಾಯ ಇಲಾಖೆ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಕಂದಾಯ ಇಲಾಖೆಯಲ್ಲಿ ಸುಮಾರು 800ಕ್ಕೂ ಅಧಿಕ ಅರ್ಜಿಗಳು ಇದ್ದು, ಯಾವುದೂ ವಿಲೇವಾರಿಯಾಗುತ್ತಿಲ್ಲ ಎಂದು ಸದಸ್ಯ ಪ್ರಭಾಕರ ಪ್ರಭು ಹೇಳಿದರು. ಇದಕ್ಕುತ್ತರಿಸಿದ ತಹಶೀಲ್ದಾರ್, ಬಾಕಿ ಇರುವ ಅರ್ಜಿಗಳ ವಿಲೇವಾರಿ ಶೀಘ್ರ ಮಾಡುತ್ತೇವೆ ಯಾವುದನ್ನೂ ಉಳಿಸಿಡುವುದಿಲ್ಲ ಎಂದರು.

ಶಾಲೆಗಳಿಗೆ ಶೇ. 95ರಷ್ಟು ಪಠ್ಯಪುಸ್ತಕಗಳ ವಿತರಣೆ

ಸಮಾಜ ಕಲ್ಯಾಣ ಇಲಾಖೆಯ ಗುತ್ತಿಗೆ ಸಿಬ್ಬಂದಿ ಹೆರಿಗೆಗೆಂದು ಹೋದವರನ್ನು ಕೆಲಸಕ್ಕೆ ಏಕೆ ತೆಗೆದುಕೊಂಡಿಲ್ಲ ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ ಪ್ರಶ್ನಿಸಿದರು. ಈ ಸಂದರ್ಭ ಉತ್ತರಿಸಿದ ಅಧಿಕಾರಿ, ಅವರು ಇಲಾಖೆ ಸಿಬ್ಬಂದಿಯಲ್ಲ, ಗುತ್ತಿಗೆ ಆಧಾರದಲ್ಲಿ ಖಾಸಗಿ ಏಜನ್ಸಿ ಮೂಲಕ ಕೆಲಸ ಮಾಡುತ್ತಿದ್ದು, ಈ ಕುರಿತು ಕಾನೂನಿನ ಚೌಕಟ್ಟಿಗೆ ಅನುಸಾರವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭ ಜಿಪಂ ಸದಸ್ಯೆ ಮಮತಾ ಗಟ್ಟಿ ದನಿಗೂಡಿಸಿ, ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದರು.

ಶಾಲೆಗಳಿಗೆ ಪಠ್ಯಪುಸ್ತಕಗಳು ಶೇ. 95ರಷ್ಟು ವಿತರಣೆಯಾಗಿದ್ದು, ಸಮವಸ್ತ್ರ ಬಂದಿಲ್ಲ ಎಂದು ಬಿಇಒ ಹೇಳಿದಾಗ, ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಎಂ.ಎಸ್.ಮುಹಮ್ಮದ್ ಹೇಳಿದ್ದಕ್ಕೆ ಸದಸ್ಯ ರಮೇಶ್ ಕುಡ್ಮೇರು ಆಕ್ಷೇಪಿಸಿದರು. ಸಮವಸ್ತ್ರ ನೀಡದೇ ಇದ್ದುದು ರಾಜ್ಯ ಸರಕಾರದ ವೈಫಲ್ಯ ಎಂದು ಜಿಪಂ ಸದಸ್ಯ ತುಂಗಪ್ಪ ಬಂಗೇರ ಆರೋಪಿಸಿದರು. ಇದನ್ನು ಜಿಲ್ಲಾ ಪಂಚಾಯತ್‍ನಲ್ಲಿ ಪ್ರಸ್ತಾಪಿಸಲಿ ಎಂದ ಸದಸ್ಯ ಉಸ್ಮಾನ್, ಸ್ಥಳೀಯ ವಿಚಾರಗಳ ಕುರಿತು ಆದ್ಯತೆ ನೀಡುವಂತೆ ಆಗ್ರಹಿಸಿದರು.

ಶಾಲಾ ಆವರಣದಲ್ಲಿ ಮಾದಕ ದ್ರವ್ಯಗಳ ಮಾರಾಟವಾಗುತ್ತಿರುವ ವಿಚಾರದ ಕುರಿತು ಸದಸ್ಯ ಹೈದರ್ ಕೈರಂಗಳ ಗಮನ ಸೆಳೆದರು.

ಕಂದಾಯ ಅದಾಲತ್ ನನ್ನು ಕಾಟಾಚಾರಕ್ಕೆ ಮಾಡಬೇಡಿ

ಕಂದಾಯ ಅದಾಲತ್ ನನ್ನು ಕಾಟಾಚಾರಕ್ಕೆ ಮಾಡಬೇಡಿ ಎಂದು ಹೇಳಿದ ಉಸ್ಮಾನ್ ಕರೋಪಾಡಿ, ಇದರಿಂದ ಸಮಸ್ಯೆ ಪರಿಹಾರ ಆಗುತ್ತದೆಯೇ ಎಂದು ಪ್ರಶ್ನಿಸಿದರು. ಸಹಾಯಕ ಕಮೀಷನರ್ ಉಪಸ್ಥಿತಿಯಲ್ಲಿ ಅದಾಲತ್ ನಡೆದರೆ ಲಾಭ, ಇಲ್ಲವಾದರೆ ಏನೂ ಉಪಯೋಗವಿಲ್ಲ ಎಂದು ಅವರು ತಿಳಿಸಿದರು. ಇರಾದಲ್ಲಿ ನಡೆದ ಕಂದಾಯ ಅದಾಲತ್ ನಲ್ಲಿ ಗ್ರಾಮಕರಣಿಕರೇ ಬಂದಿಲ್ಲ ಎಂದು ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಹೇಳಿದರೆ, ನಮ್ಮ ಗ್ರಾಮಸಭೆಯ ದಿನವೇ ಅದಾಲತ್ ನಡೆದಿತ್ತು ಎಂದು ಗ್ರಾಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ ಹೇಳಿದರು.

ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ಕೆಡಹಲು ಅನುಮೋದನೆ

ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಕೊಠಡಿಗಳನ್ನು ಕೆಡಹಲು ಸಭೆ ಅನುಮೋದನೆ ನೀಡಿತು. ಮೂರ್ಜೆ, ದಡ್ಡಲಕಾಡು, ನೆಟ್ಲ, ಕಡೇಶಿವಾಲಯ, ಕುಳಾಲು, ಕರ್ವೇಲು, ನಾರ್ಶ ಮೈದಾನ, ಇರಾ, ತಲೆಮೊಗರು, ಸಜಿಪಮುನ್ನೂರು, ಸುಜೀರು, ಪಾಣೇಲಬರಿಕೆ, ನರಿಂಗಾನ, ಸುರಿಬೈಲು, ಸೂರ್ಯ, ಮಂಚಿಕೊಳ್ನಾಡು ಶಾಲೆಗಳ ಕೊಠಡಿಗಳನ್ನು ಕೆಡಹಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ತುಂಗಪ್ಪ ಬಂಗೇರ, ಮಂಜುಳಾ ಮಾವೆ, ಎಂ.ಎಸ್.ಮುಹಮ್ಮದ್, ಕಮಲಾಕ್ಷಿ ಪುಜಾರಿ, ಮಮತಾ ಗಟ್ಟಿ, ತಾಪಂ ಸದಸ್ಯರಾದ ಉಸ್ಮಾನ್ ಕರೋಪಾಡಿ, ಸಂಜೀವ ಪೂಜಾರಿ, ಎಂ.ಆರ್. ಹೈದರ್, ಆದಂ ಕುಂಞಿ, ಪ್ರಭಾಕರ ಪ್ರಭು, ರಮೇಶ್ ಕುಡ್ಮೇರು ವಿವಿಧ ವಿಷಯಗಳ ಕುರಿತು ಮಾತನಾಡಿದರು.

ಉಪಾಧ್ಯಕ್ಷ ಅಬ್ಬಾಸ್ ಅಲಿ, ಇಒ ರಾಜಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News