ನೀರಿನ ಸಂಪರ್ಕವಿಲ್ಲದೆ ಬಿಲ್ಲು: ಬಂಟ್ವಾಳ ಪುರಸಭೆಯ ಎಡವಟ್ಟು?

Update: 2019-06-26 15:55 GMT

ಬಂಟ್ವಾಳ, ಜೂ. 25: ಕುಡಿಯುವ ನೀರಿನ ಸಂಪರ್ಕಕ್ಕೆ ಠೇವಣಿ ಇಟ್ಟು ವರ್ಷ ಕಳೆದರೂ ಬಂಟ್ವಾಳ ಪುರಸಭೆ ನೀರಿನ ಸಂಪರ್ಕವನ್ನು ಇದುವರೆಗೂ ಕಲ್ಪಿಸದೇ 373 ರೂ. ಶುಲ್ಕದ ಬಿಲ್ಲು ನೀಡಿದೆ ಎಂದು ಪಾಣೆಮಂಗಳೂರಿನ ಮೆಲ್ಕಾರ್ ನಿವಾಸಿಯೊಬ್ಬರು ಆರೋಪಿಸಿದ್ದಾರೆ.

ಕುಡಿಯುವ ನೀರಿಗಾಗಿ ಅಧಿಕೃತ ನಳ್ಳಿ ಸಂಪರ್ಕ ಕಲ್ಪಿಸಲು ಪುರಸಭೆಗೆ 1,500 ರೂ. ಪಾವತಿಸಿ ಅರ್ಜಿ ಸಲ್ಲಿಸಿದ್ದೆ. ಆದರೆ, ವರ್ಷ ಕಳೆದರೂ ಪುರಸಭೆ ನಳ್ಳಿ ಸಂಪರ್ಕ ಮಾತ್ರ ಕಲ್ಪಿಸಿರಲಿಲ್ಲ. ಈ ಬಗ್ಗೆ ಕಳೆದ ಮಾರ್ಚ್ 8ರಂದು ಬಂಟ್ವಾಳ ಪುರಸಭೆಗೆ ನೆನೆಪೋಲೆ ಅರ್ಜಿ ಸಲ್ಲಿಸಿದರೂ, ಪುರಸಭೆ ಮಾತ್ರ ಸ್ಪಂದಿಸಿಲ್ಲ ಎಂದು ಪಾಣೆಮಂಗಳೂರಿನ ಬೋಳಂಗಡಿ ನಿವಾಸಿ ಮೆಲ್ವಿನ್ ಡೇಸಾ ದೂರಿದ್ದಾರೆ.

ಅದಲ್ಲದೆ, ನೀರಿನ ಸಂಪರ್ಕಕ್ಕಾಗಿ ಠೇವಣಿ ಇರಿಸಲಾದ ರಶೀದಿಯೊಂದಿಗೆ ನೀರಿನ ಮೀಟರ್ ಸಂಖ್ಯೆಯನ್ನು ಪುರಸಭಾ ಕಚೇರಿಯಲ್ಲಿ ಪರಿಶೀಲಿಸಿದಾಗ 373 ರೂ. ನೀರಿನ ಶುಲ್ಕದ ಬಿಲ್‍ನ್ನು ತನ್ನ ಕೈಗೆ ನೀಡಿದ್ದಾರೆ ಎಂದು ಮೆಲ್ವಿನ್ ತಿಳಿಸಿದ್ದಾರೆ.

ನೀರಿನ ಸಂಪರ್ಕಕ್ಕಾಗಿ ಒಂದು ವರ್ಷದಿಂದ ಸತಾಯಿಸುತ್ತಿರುವ ಬಂಟ್ವಾಳ ಪುರಸಭೆ ಈಗ ನೀರಿನ ಸಂಪರ್ಕವಿಲ್ಲದೆ ನೀರಿನ ಶುಲ್ಕದ ಬಿಲ್ಲು ನೀಡಿರುವ ಹಾಗೂ ಪುರಸಭೆಯ ಈ ಎಡವಟ್ಟಿನ ಬಗ್ಗೆ ಮಾಧ್ಯಮದವರೊಂದಿಗೆ ದೂರಿಕೊಂಡಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News