ಯುವ ಅಪರಾಧಿಗಳ ಸುಧಾರಣೆ ಮತ್ತು ಪುನರ್ವಸತಿ ಬಗ್ಗೆ ಅಂಕಿಅಂಶ ಪಡೆಯಿರಿ: ಬಿಪಿಆರ್‌ಡಿಗೆ ಸಿಐಸಿ ಸೂಚನೆ

Update: 2019-06-26 16:48 GMT

 ಹೊಸದಿಲ್ಲಿ, ಜೂ.26: ಭಾರತದಾದ್ಯಂತ ಜೈಲಿನಲ್ಲಿರುವ ಯುವ ಅಪರಾಧಿಗಳ ಸುಧಾರಣೆ ಮತ್ತು ಪುನರ್ವಸತಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಪಡೆಯಲು ಶ್ರಮಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಪೊಲೀಸ್ ಸಂಶೋಧನಾ ಸಂಘ ಬಿಪಿಆರ್‌ಡಿಗೆ ಸೂಚನೆ ನೀಡಿದೆ.

 ಒಂದು ರಾಷ್ಟ್ರೀಯ ತಜ್ಞರ ಸಲಹಾ ಸಂಘವಾಗಿ ತನ್ನ ಜವಾಬ್ದಾರಿಯನ್ನು ನಿಬಾಯಿಸಲು ಮತ್ತು ತನ್ನ ಉದ್ದೇಶವನ್ನು ಪೂರ್ಣಗೊಳಿಸಲು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 25ರ ಅಡಿಯಲ್ಲಿ ಸಿಐಸಿ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿ (ಬಿಪಿಆರ್‌ಡಿ)ಗೆ ಈ ನಿರ್ದೇಶ ನೀಡಿದೆ.

 ಬಾಲಾಪರಾಧಿ ಮತ್ತು ವಯಸ್ಕ ಅಪರಾಧಿಯ ವಯಸ್ಸಿನ ವರ್ಗೀಕರಣದ ಬಗ್ಗೆ ತಿಳಿಯಲು ಮತ್ತು ಪ್ರತಿ ರಾಜ್ಯದಲ್ಲಿ ಖೈದಿಗಳನ್ನು ಬಾಲಾಪರಾಧಿಗಳು ಮತ್ತು ವಯಸ್ಕ ಅಪರಾಧಿಗಳು ಎಂದು ವರ್ಗೀಕರಿಸಲು ಕಾರಣವನ್ನು ತಿಳಿಯ ಬಯಸಿ ಚಂದರ್ ಪ್ರಕಾಶ್ ಎಂಬವರು ಆರ್‌ಟಿಐ ಅಡಿ ಕೇಳಿದ್ದ ಮಾಹಿತಿಯ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ಬಿಪಿಆರ್‌ಇಯಿಂದ ತೃಪ್ತಿಕರ ಮಾಹಿತಿ ಲಭ್ಯವಾಗಿಲ್ಲ ಎಂದು ಆರೋಪಿಸಿ ಪ್ರಕಾಶ್ ಅವರು ಆರ್‌ಟಿಐಯ ವಿಷಯಗಳನ್ನು ಪರಿಶೀಲಿಸುವ ಅತ್ಯುನ್ನತ ಸಂಸ್ಥೆ ಸಿಐಸಿ ಬಳಿ ಮನವಿ ಸಲ್ಲಿಸಿದ್ದರು. ಅಂತಹ ಮಾಹಿತಿಗಳನ್ನು ಇಟ್ಟುಕೊಳ್ಳುವುದಿಲ್ಲ ಎಂದು ಬಿಪಿಆರ್‌ಡಿ ತಿಳಿಸಿದ್ದರೆ ಜೈಲುಗಳು ರಾಜ್ಯಗಳಿಗೆ ಸಂಬಂಧಪಟ್ಟ ವಿಷಯ ಎಂದು ಗೃಹ ಸಚಿವಾಲಯ ಪ್ರತಿಕ್ರಿಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News