ಬ್ಯಾಂಕ್‌ಗಳ ಜೊತೆ ಸಾಲ ಬಾಕಿದಾರರ ಆಸ್ತಿ, ಖಾತೆ ಮಾಹಿತಿ ಹಂಚಲು ತೆರಿಗೆ ಅಧಿಕಾರಿಗಳಿಗೆ ಸಿಬಿಡಿಟಿ ಸೂಚನೆ

Update: 2019-06-26 17:07 GMT

ಹೊಸದಿಲ್ಲಿ, ಜೂ.26: ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಸಾಲ ಬಾಕಿದಾರರ ಆಸ್ತಿ ಮತ್ತು ಖಾತೆಗಳ ಮಾಹಿತಿಯನ್ನು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳ ಜೊತೆ ಹಂಚಿಕೊಳ್ಳುವಂತೆ ಆದಾಯ ತೆರಿಗೆ ಇಲಾಖೆಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ನಿರ್ದೇಶ ನೀಡಿದೆ.

 ಸಾಲ ಬಾಕಿಯಿರುವ ಸಂಸ್ಥೆಗಳ ವಿರುದ್ಧ ಹಿಡಿತನ್ನು ಗಟ್ಟಿಗೊಳಿಸಲು ಮತ್ತು ಸಾರ್ವಜನಿಕರ ಹಣವನ್ನು ಮರುಪಡೆಯುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಲ ಬಾಕಿದಾರರಿಂದ ಮರುಪಾವತಿ ಸುಲಭವಾಗಲು ಅವರ ಸ್ಥಿರಾಸ್ತಿಗಳ ಬಗ್ಗೆ ಮಾಹಿತಿ ಒದಗಿಸುವಂತೆ ಕೋರಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಮಾಡಿದ ಮನವಿಗಳ ಹಿನ್ನೆಲೆಯಲ್ಲಿ ಸಿಬಿಡಿಟಿ ಈ ಆದೇಶವನ್ನು ನೀಡಿದೆ.

ಸಾಲ ಬಾಕಿದಾರರ ಬಳಿಯಿರುವ ಸ್ಥಿರಾಸ್ತಿಗಳ ಬಗ್ಗೆ ಬ್ಯಾಂಕ್‌ಗಳಿಗೆ ಮಾಹಿತಿ ನೀಡುವುದು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರುವುದರಿಂದ ಹಾಗೆ ಮಾಡಬಹುದು ಎಂದು ಸಿಬಿಡಿಟಿ ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಉನ್ನತ ಮಟ್ಟದ ಬ್ಯಾಂಕ್ ಸಾಲ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ವಜ್ರಾಭರಣ ವ್ಯಾಪಾರಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಯ ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 13,000ಕೋ.ರೂ. ವಂಚನೆ, ಸ್ಟರ್ಲಿಂಗ್ ಬಯೋಟೆಕ್ ಪ್ರಕರಣ, ಮದ್ಯದ ದೊರೆ ವಿಜಯ್ ಮಲ್ಯಾ ಭಾಗಿಯಾಗಿರುವ ಪ್ರಕರಣ ಪ್ರಮುಖವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News