"ಸಚಿವರಿಗೆ ತಮ್ಮ ಪದವಿ ತೋರಿಸಲು ಸಾಧ್ಯವಿಲ್ಲದ ದೇಶದಲ್ಲಿ ಬಡವರ ನಾಗರಿಕತ್ವಕ್ಕೆ ದಾಖಲೆ ಕೇಳುತ್ತಿದ್ದೀರಿ"

Update: 2019-06-27 04:58 GMT

ಹೊಸದಿಲ್ಲಿ, ಜೂ.27: ಮಂಗಳವಾರ ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಮೊದಲ ಬಾರಿಯ ಸಂಸದೆ ಮಹುಆ ಮೊಯಿತ್ರಾ ಅವರು ಮಾಡಿರುವ ಆಕ್ರಮಣಕಾರಿ ಭಾಷಣದ ಚರ್ಚೆ ಎಲ್ಲೆಡೆ ಇನ್ನೂ ಮುಂದುವರಿದಿದೆ. ಅದೇ ದಿನ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರೂ ಭಾಷಣ ಮಾಡಿ ಎಂದಿನಂತೆ ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದಿದ್ದರು. ಆದರೆ ಮಹುಆ ಭಾಷಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಪರ ವಿರೋಧ ವಾಗ್ವಾದ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ನಿಚ್ಚಳವಾಗಿದೆ. 

ಲೋಕಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ಮಹುಆ ಯಾವುದೇ ಔಪಚಾರಿಕ ನಯವಿನಯ ಪ್ರದರ್ಶಿಸದೆ ನೇರವಾಗಿ ವಿಷಯಕ್ಕೆ ಬಂದಿದ್ದಾರೆ. ಅನುಭವಿ ಹಿರಿಯರೂ ಉಲ್ಲೇಖಿಸಲು ಹಿಂಜರಿಯುವ ವಿಷಯಗಳನ್ನು ಯಾವುದೇ ಮುಲಾಜಿಲ್ಲದೆ ಅತ್ಯಂತ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಭಾರತದಲ್ಲಿ ಫ್ಯಾಶಿಸಂನ ಏಳು ಆರಂಭಿಕ ಲಕ್ಷಣಗಳು ಈಗಾಗಲೇ ಕಾಣುತ್ತಿವೆ ಎಂಬುದು ಅವರ ಭಾಷಣದ ಪ್ರಮುಖ ಅಂಶ. 

ತಮ್ಮ ಭಾಷಣದಲ್ಲಿ ರಾಷ್ಟ್ರೀಯ ನಾಗರಿಕ ದಾಖಲೆ(ಎನ್.ಆರ್.ಸಿ.) ಬಗ್ಗೆ ಉಲ್ಲೇಖಿಸಿದ ಮಹುಆ ಹೇಳಿದ ಮಾತುಗಳು ಆಡಳಿತ ಪಕ್ಷಕ್ಕೆ ಭಾರೀ ಬಿಸಿ ಮುಟ್ಟಿಸಿವೆ. " ಈ ದೇಶದಲ್ಲಿ 50 ವರ್ಷಗಳಿಗಿಂತ ಹೆಚ್ಚು ಸಮಯದಿಂದ ಬದುಕುತ್ತಿರುವವರು ತಾವು ಭಾರತೀಯರು ಎಂದು ಸಾಬೀತುಪಡಿಸಲು ಒಂದು ತುಂಡು ಕಾಗದ ತೋರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾವು ಒಂದು ಕಾಲೇಜಿನಿಂದ ಪದವಿ ಪಡೆದಿದ್ದೇವೆ ಎಂದು ಸಾಬೀತುಪಡಿಸಲು ತಮ್ಮ ಪದವಿ ಪ್ರಮಾಣಪತ್ರವನ್ನು ತೋರಿಸಲು ಮಂತ್ರಿಗಳಿಗೆ ಸಾಧ್ಯವಿಲ್ಲದ ದೇಶದಲ್ಲಿ ನೀವು ನಿರ್ವಸಿತ ಬಡ ಜನರು ಈ ದೇಶದ ನಾಗರಿಕರು ಎಂದು ಸಾಬೀತುಪಡಿಸಲು ದಾಖಲೆ ಪತ್ರ ಕೇಳುತ್ತಿದ್ದೀರಿ " ಎಂದು ಮಹುಆ ಬಿಜೆಪಿ ಮೇಲೆ ಹರಿಹಾಯ್ದಿದ್ದಾರೆ.

ಇದು ಪರೋಕ್ಷವಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮೇಲೆ ಮಾಡಿರುವ ವಾಗ್ದಾಳಿ. ಈ ಇಬ್ಬರೂ ನಾಯಕರ ಪದವಿ ಕುರಿತ ವಿವಾದ ಇನ್ನೂ ಬಗೆಹರಿದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News