ವಿಶ್ವಕಪ್: ವಿಂಡೀಸ್ ಗೆಲ್ಲಲು 269 ರನ್ ಸವಾಲು
ಮ್ಯಾಂಚೆಸ್ಟರ್, ಜೂ.27: ನಾಯಕ ವಿರಾಟ್ ಕೊಹ್ಲಿ ಟೂರ್ನಮೆಂಟ್‌ನಲ್ಲಿ ಗಳಿಸಿದ ಸತತ 4ನೇ ಅರ್ಧಶತಕ (72, 82 ಎಸೆತ) ಹಾಗೂ ಧೋನಿಯ ಉತ್ತಮ ಬ್ಯಾಟಿಂಗ್(ಔಟಾಗದೆ 56, 61 ಎಸೆತ) ನೆರವಿನಿಂದ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಗೌರವಾರ್ಹ ಮೊತ್ತ ದಾಖಲಿಸಿದೆ.
ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 268 ರನ್ ಗಳಿಸಿತು.
ಟಾಸ್ ಜಯಿಸಿದ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಕೆಮರ್ ರೋಚ್(3-36) ಮೂರು ಮುಖ್ಯ ವಿಕೆಟ್‌ಗಳನ್ನು ಕಬಳಿಸುವುದರೊಂದಿಗೆ ಭಾರತಕ್ಕೆ ಆರಂಭದಲ್ಲಿ ಆಘಾತ ನೀಡಿದರು.
ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ರೋಹಿತ್ ಶರ್ಮಾ(18) ವಿಕೆಟನ್ನು ಉರುಳಿಸಿದ ರೋಚ್ ವಿಂಡೀಸ್‌ಗೆ ಮೊದಲ ಮೇಲುಗೈ ಒದಗಿಸಿದರು. ನಾಯಕ ಜೇಸನ್ ಹೋಲ್ಡರ್‌ಗೆ ವಿಕೆಟ್ ಒಪ್ಪಿಸಿದ ಇನ್ನೋರ್ವ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ (48)ಕೇವಲ 2 ರನ್‌ನಿಂದ ಅರ್ಧಶತಕ ವಂಚಿತರಾದರು.
ಮತ್ತೊಮ್ಮೆ ನಿರಾಸೆಗೊಳಿಸಿದ ನಾಲ್ಕನೇ ಕ್ರಮಾಂಕದ ದಾಂಡಿಗ ವಿಜಯ ಶಂಕರ್, ರೋಚ್‌ಗೆ ಎರಡನೇ ಬಲಿಯಾದರು. ಶಂಕರ್ ಕೇವಲ 14 ರನ್ ಗಳಿಸಿ ಔಟಾದರು. 29ನೇ ಓವರ್‌ನಲ್ಲಿ ಕೇದಾರ್ ಜಾಧವ್(7) ವಿಕೆಟನ್ನು ಉರುಳಿಸಿದ ರೋಚ್ ಭಾರತಕ್ಕೆ ಮತ್ತೊಂದು ಆಘಾತ ನೀಡಿದರು.
82 ಎಸೆತಗಳಲ್ಲಿ 72 ರನ್ ಗಳಿಸಿದ ಕೊಹ್ಲಿ , ಹೋಲ್ಡರ್ ಬೌಲಿಂಗ್‌ನಲ್ಲಿ ಮಿಡ್‌ವಿಕೆಟ್‌ನಲ್ಲಿದ್ದ ಬ್ರಾವೊಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು. ಔಟಾಗುವ ಮೊದಲು ರಾಹುಲ್‌ರೊಂದಿಗೆ 2ನೇ ವಿಕೆಟ್‌ಗೆ 69 ಹಾಗೂ ಧೋನಿಯೊಂದಿಗೆ 5ನೇ ವಿಕೆಟ್‌ಗೆ 40 ರನ್ ಜೊತೆಯಾಟ ನಡೆಸಿದರು.
ಕೊಹ್ಲಿ ಔಟಾದ ಬಳಿಕ ಹಾರ್ದಿಕ್ ಪಾಂಡ್ಯರೊದಿಗೆ ಕೈಜೋಡಿಸಿದ ಧೋನಿ 6ನೇ ವಿಕೆಟ್ ಜೊತೆಯಾಟದಲ್ಲಿ 70 ರನ್ ಗಳಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. 49ನೇ ಓವರ್‌ನಲ್ಲಿ ಕಾಟ್ರೆಲ್‌ಗೆ ವಿಕೆಟ್ ಒಪ್ಪಿಸಿದ ಪಾಂಡ್ಯ(46, 38 ಎಸೆತ, 5 ಬೌಂಡರಿ)ಅರ್ಧಶತಕ ವಂಚಿತರಾದರು.