ಸಾಮರಸ್ಯಕ್ಕೆ ಸಾಕ್ಷಿಯಾದ ಅಂತ್ಯಸಂಸ್ಕಾರ

Update: 2019-06-27 15:04 GMT

ಲಕ್ನೊ, ಜೂ.27: ಹಿಂದೂ ವ್ಯಕ್ತಿಯ ಮರಣೋತ್ತರ ವಿಧಿಯನ್ನು ನಿರ್ವಹಿಸುವ ಮೂಲಕ ಉತ್ತರಪ್ರದೇಶದ ಮುಸ್ಲಿಂ ಕುಟುಂಬವೊಂದು ಕೋಮು ಸಾಮರಸ್ಯ ಮೆರೆದಿದೆ.

ಹಿಂದೂ ಸಂಪ್ರದಾಯದಲ್ಲಿ ವ್ಯಕ್ತಿಯ ಅಂತ್ಯಸಂಸ್ಕಾರದ ನಂತರ 13ನೇ ದಿನ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವವಿದೆ. ಉತ್ತರಪ್ರದೇಶದ ಹರಿರಾಮಪುರ ಗ್ರಾಮದ ನಿವಾಸಿ ಮುರಾರಿಲಾಲ್ ಶ್ರೀವಾಸ್ತವ ( 65 ವರ್ಷ) ಎಂಬವರು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಜೂನ್ 13ರಂದು ವಿಷಜಂತುವಿನ ಕಡಿತದಿಂದ ಮೃತಪಟ್ಟಿದ್ದರು. ಇವರು ಅನಾಥನಾಗಿದ್ದರಿಂದ ಸಂಸ್ಥೆಯ ಮಾಲಕರಾದ ಮುಹಮ್ಮದ್ ಖಾನ್ ಮತ್ತು ಫರೀದ್ ಖಾನ್ ಸಂಸ್ಥೆಯ ಇತರ ಕಾರ್ಮಿಕರ ನೆರವಿನಿಂದ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಅಲ್ಲದೆ 13ನೆಯ ದಿನದ ಕಾರ್ಯವನ್ನೂ ನಡೆಸಿದ್ದು, ಸಂಸ್ಥೆಯ ಮತ್ತು ಖಾನ್ ಕುಟುಂಬದ ಹೆಸರಿನಲ್ಲಿ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಲಾಗಿದೆ. ತಲೆ ಬೋಳಿಸಿಕೊಳ್ಳುವುದು, ಶಾಂತಿ ಪಾಠ ಮುಂತಾದ ಎಲ್ಲಾ ಪ್ರಕ್ರಿಯೆಗಳನ್ನೂ ಸಂಪ್ರದಾಯದಂತೆ ನಡೆಸಲಾಗಿದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸುಮಾರು 1 ಸಾವಿರ ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೋಮು ಸೌಹಾರ್ದಕ್ಕೆ ಸಾಕ್ಷಿಯಾದರು.

 ಶ್ರೀವಾಸ್ತವ ಕಳೆದ 15 ವರ್ಷಗಳಿಂದ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬದವರಂತೆಯೇ ಇದ್ದರು. ನಮ್ಮ ಕುಟುಂಬದ ಹಿರಿಯನಂತೆ ಅವರನ್ನು ನೋಡಿಕೊಳ್ಳುತ್ತಿದ್ದೆವು. ಕುಟುಂಬದ ಹಿರಿಯನಿಗೆ ಮಾಡಬೇಕಾದ ಕರ್ತವ್ಯವನ್ನು ನೆರವೇರಿಸಿದ್ದೇವೆ ಎಂದು ಇರ್ಫಾನ್ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News