ಉ.ಪ್ರದೇಶ: ಜೈಲಿನಲ್ಲಿ ಕೈದಿಗಳ ಕೈಯಲ್ಲಿ ‘ಪಿಸ್ತೂಲ್’!

Update: 2019-06-27 16:34 GMT

 ಲಕ್ನೋ,ಜೂ.27: ಉತ್ತರಪ್ರದೇಶದ ಉನ್ನಾವೊ ಜೈಲಿನಲ್ಲಿ ಕೆಲವು ಕೈದಿಗಳು ಪಿಸ್ತೂಲ್ ಗಳನ್ನು ಹಿಡಿದಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿ ರಾಜ್ಯದ ಗೃಹ ಸಚಿವಾಲಯವು ನಾಲ್ಕು ಮಂದಿ ಜೈಲು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದೆ.

  ವಿಡಿಯೋದಲ್ಲಿ ಕೈದಿ ದೇವ್‌ಪ್ರತಾಪ್‌ಸಿಂಗ್ ಎಂಬಾತ ಕ್ಯಾಮರಾದ ಮುಂದೆ ಕವಿತೆಯೊಂದನ್ನು ಹಾಡುವ ದೃಶ್ಯವನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಜೈಲುಗಳನ್ನು ನಮ್ಮ ಕಚೇರಿಯಾಗಿ ಮಾರ್ಪಡಿಸುವುದಾಗಿಯೂ ಆತ ವಿಡಿಯೋದ ಮುಂದೆ ಹೇಳಿಕೊಂಡಿದ್ದಾನೆ.

 ಇನ್ನೋರ್ವ ಕೈದಿ ಆಂಕುರ್ ಎಂಬಾತ,ಜೈಲು ಉನ್ನಾವೋ ಆಗಿರಲಿ ಅಥವಾ ಮೀರತ್ ಆಗಿರಲಿ, ಒಂದು ವೇಳೆ ತಾನು ಆದೇಶಿಸಿದಲ್ಲಿ ಜೈಲಿನಲ್ಲಿರುವ ಯಾರೂ ಕೂಡಾ ಕೊಲೆಯಾಗಬಹುದಾಗಿದೆ. ಇಲ್ಲಿ ನಡೆಯುವುದು ಅಂಕುರ್ ಬ್ರಾಂಡ್ ಆಗಿದೆ ಎಂದು ಹೇಳುತ್ತಾನೆ.

   ಅಮರೀಶ್ ಬಾಟಿಪುರ ಎಂದು ಗುರುತಿಸಲ್ಪಟ್ಟ ಇನ್ನೋರ್ವ ಕೈದಿಯು ಆದಿತ್ಯನಾಥ್ ಸರಕಾರವು ತನ್ನನ್ನು ಜೈಲಿಗೆ ತಳ್ಳಿದೆ. ಆದರೆ ಉನ್ನಾವೊ ಅಥವಾ ಮೀರತ್‌ನ ಜೈಲುಗಳಲ್ಲಿ ತನ್ನ ಬದುಕನ್ನು ಶೋಚನೀಯಗೊಳಿಸಲು ಅದಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿದ್ದಾನೆ. ತಾವು ಈ ಸ್ಥಳವನ್ನು ತಮ್ಮ ಕಚೇರಿಯಾಗಿ ಮಾರ್ಪಡಿಸುವುದಾಗಿಯೂ ಆತ ಹೇಳಿಕೊಂಡಿದ್ದಾನೆ.

ಮಾದಕವಸ್ತುಗಳ ಹೊಂದಿರುವಂತೆ ತೋರುವ ಚೀಲವೊಂದನ್ನು ಕೂಡಾ ಆತ ವಿಡಿಯೋದಲ್ಲಿ ಪ್ರದರ್ಶಿಸಿದ್ದಾನೆ. ವಿಡಿಯೋದಲ್ಲಿ ಕೈದಿಗಳು ಮದ್ಯಪಾನ ಸೇವನೆ ಬಗ್ಗೆ ಚರ್ಚಿಸುವುದನ್ನೂ ಕೂಡಾ ತೋರಿಸಲಾಗಿದೆ.

ಆದರೆ ಉತ್ತರಪ್ರದೇಶದ ಗೃಹ ಇಲಾಖೆ ಅಧಿಕಾರಿಗಳು ಕೈದಿಗಳ ಕೈಯಲ್ಲಿದ್ದ ಪಿಸ್ತೂಲುಗಳು ಆವೆಮಣ್ಣಿನದ್ದೆಂದು ಹೇಳಿದ್ದಾರೆ. ಆದಾಗ್ಯೂ ಜೈಲಿನೊಳಗೆ ಕೈದಿಗಳಲ್ಲಿ ಮೊಬೈಲ್ ಫೋನ್ ಇದ್ದುದನ್ನು ಅವರು ಒಪ್ಪಿಕೊಂಡಿದ್ದಾರೆ.

 ಘಟನೆಗೆ ಸಂಬಂಧಿಸಿ ಉನ್ನತ ಅಧಿಕಾರಿಗಳಿಗೆ ವರದಿಯನ್ನು ಕಳುಹಿಸಲಾಗಿದೆ ಹಾಗೂ ಮುಂದಿನ ಒಂದೆರಡು ದಿನಗಳೊಳಗೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಉನ್ನಾವೊದ ಜೈಲು ಅಧೀಕ್ಷಕ ಜೆ.ಕೆ.ಸಿಂಗ್ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News