​ಅತ್ಯಾಚಾರಕ್ಕೆ ಪ್ರತಿರೋಧ ತೋರಿದ ಮಹಿಳೆಯರಿಗೆ ಸಿಕ್ಕ ಶಿಕ್ಷೆ ಏನು ಗೊತ್ತೇ ?

Update: 2019-06-28 04:02 GMT

ಪಾಟ್ನಾ: ಸ್ಥಳೀಯ ವಾರ್ಡ್‌ನ ಕೌನ್ಸಿಲರ್ ಅತ್ಯಾಚಾರಕ್ಕೆ ಯತ್ನಿಸಿದಾಗ ಪ್ರತಿರೋಧ ವ್ಯಕ್ತಪಡಿಸಿದ ತಾಯಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿ ಅವರ ತಲೆ ಬೋಳಿಸಿದ ಅಮಾನವೀಯ ಘಟನೆ ವೈಶಾಲಿ ಜಿಲ್ಲೆಯ ಬಿಹಾರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ವಾರ್ಡ್ ಕೌನ್ಸಿಲರ್ ಮೊಹ್ಮದ್ ಖುರ್ಷಿದ್ ಹಾಗೂ ಆತನ ಸಹಚರರು ಮಹಿಳೆಯರ ಮೇಲೆ ಹಲ್ಲೆ ನಡೆಸಿ ಅವರ ತಲೆ ಬೋಳಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೌನ್ಸಿಲರ್, ಕ್ಷೌರಿಕ ಹಾಗೂ ಇತರ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಭಗವಾನ್‌ಪುರ ಠಾಣೆಯ ಅಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ. ಐದಾರು ಮಂದಿಯ ಗುಂಪು ಮಹಿಳೆಯ ಮನೆಗೆ ನುಗ್ಗಿ ಇತ್ತೀಚೆಗಷ್ಟೇ ವಿವಾಹವಾದ ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿತು. ಮಗಳ ರಕ್ಷಣೆಗೆ ತಾಯಿ ಧಾವಿಸಿದಾಗ ತಾಯಿ- ಮಗಳ ಮೇಲೆ ಗುಂಪು ಹಲ್ಲೆ ನಡೆಸಿತು ಎಂದು ಅವರು ವಿವರಿಸಿದ್ದಾರೆ.

ಗುಂಪಿನಲ್ಲಿದ್ದ ಒಬ್ಬ ಆರೋಪಿ ಕಟ್ಟಿಗೆಯಿಂದ ಹೊಡೆದು ತಾಯಿ- ಮಗಳನ್ನು ಮನೆಯಿಂದ ಹೊರಕ್ಕೆ ಎಳೆದು ಹಾಕಿದ ಹಾಗೂ ಅಲ್ಲೇ ಪಂಚಾಯ್ತಿ ನಡೆಸಲು ಮುಂದಾದ. ಖುರ್ಷಿದ್ ತಕ್ಷಣ ಕ್ಷೌರಿಕನೊಬ್ಬನನ್ನು ಕರೆದು ಮಹಿಳೆಯರ ತಲೆ ಬೋಳಿಸುವಂತೆ ಸೂಚಿಸಿದ. ಬಳಿಕ ಗ್ರಾಮದಲ್ಲಿ ಅವರನ್ನು ಮೆರವಣಿಗೆ ಮಾಡಲಾಯಿತು.

ಇಬ್ಬರು ಮಹಿಳೆಯರು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂದು ಖುರ್ಷಿದ್ ಹೇಳಿದ್ದಾಗಿ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News