ವಾಜಪೇಯಿಯವರನ್ನು ಉಲ್ಲೇಖಿಸಿ ಮೋದಿ, ಅಮಿತ್ ಶಾಗೆ ಪತ್ರ ಬರೆದ ಮನಮೋಹನ್ ಸಿಂಗ್

Update: 2019-06-28 07:21 GMT

ಹೊಸದಿಲ್ಲಿ, ಜೂ.28: ತಮ್ಮ  ಕಚೇರಿಯ ಸಿಬ್ಬಂದಿಯನ್ನು 14ರಿಂದ 5ಕ್ಕೆ ಇಳಿಸಿದ ಕೇಂದ್ರ ಸರಕಾರದ ಕ್ರಮವನ್ನು  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತೀವ್ರವಾಗಿ ವಿರೋಧಿಸಿದ್ದಾರೆ. ಈ ಕುರಿತಂತೆ ಅವರು ಪ್ರಧಾನಿ ಕಾರ್ಯಾಲಯ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ನಿಯಮದ ಪ್ರಕಾರ ಮಾಜಿ ಪ್ರಧಾನಿಗಳಿಗೆ ತಮ್ಮ ಜೀವನಪರ್ಯಂತ ಬಾಡಿಗೆ-ರಹಿತ ನಿವಾಸ, ವೈದ್ಯಕೀಯ ಸವಲತ್ತು, 14 ಮಂದಿ ಕಾರ್ಯದರ್ಶಿಗಳು, ಆರು  ಎಕ್ಸಿಕ್ಯುಟಿವ್ ಕ್ಲಾಸ್  ದೇಶೀಯ ವಿಮಾನ ಟಿಕೆಟುಗಳು, ಅನಿಯಮಿತ ರೈಲು ಪ್ರಯಾಣ ಸೌಲಭ್ಯ, ಐದು ವರ್ಷ ಕಚೇರಿ ವೆಚ್ಚ, ಒಂದು ವರ್ಷ ಎಸ್‍ಪಿಜಿ ರಕ್ಷಣೆ ಹಾಗೂ ಜೀವನಪರ್ಯಂತ ಉಚಿತ ವಿದ್ಯುಚ್ಛಕ್ತಿ ಹಾಗೂ ನೀರು ಸೌಲಭ್ಯ ದೊರೆಯುತ್ತದೆ.

ಕಾಂಗ್ರೆಸ್ ಇದು ಮಾಜಿ ಪ್ರಧಾನಿಗೆ ಮಾಡಿದ ಅವಮಾನ ಎಂದು ಹೇಳಿದೆ. ಕೇಂದ್ರ ಸರಕಾರದ ಕ್ರಮದಿಂದಾಗಿ ಈಗ ಮನಮೋಹನ್ ಸಿಂಗ್ ಕಚೇರಿಯಲ್ಲಿ ಇಬ್ಬರು ಅಟೆಂಡರ್, ಇಬ್ಬರು ಪಿಎಗಳು ಹಾಗೂ ಒಬ್ಬ  ಕ್ಲರ್ಕ್ ಇರುತ್ತಾರೆ. ಮಾಜಿ ಪ್ರಧಾನಿಗಳ  ಕಚೇರಿಗೆ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ಕೇವಲ 5 ವರ್ಷಗಳ ಅವಧಿಗೆ ಮಾತ್ರ ನೀಡಬಹುದಾಗಿದೆ.

ಆದರೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಕಾರ್ಯಾಲಯ ಹಾಗೂ ಗೃಹ ಸಚಿವರಿಗೆ ಬರೆದ  ಪತ್ರದಲ್ಲಿ ಮಾಜಿ ಪ್ರಧಾನಿ ವಾಜಪೇಯಿಯವರಿಗೆ ಯುಪಿಎ ಸರಕಾರ 12 ಸಿಬ್ಬಂದಿಗಳನ್ನು ಒದಗಿಸಿತ್ತು ಎಂದಿದ್ದಾರಲ್ಲದೆ, ವಾಜಪೇಯಿ ಸರಕಾರ ಹಿಂದಿನ ಪ್ರಧಾನಿಗಳಾದ ಪಿ ವಿ ನರಸಿಂಹ ರಾವ್ ಹಾಗೂ ಐ ಕೆ ಗುಜ್ರಾಲ್ ಅವರಿಗೆ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಗಳ ಸಂಖ್ಯೆ ಏರಿಸಲು ಅನುಮತಿಸಿತ್ತು ಎಂಬುದನ್ನೂ ನೆನಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News