ಉನಾ: ದಲಿತ ಯುವಕನಿಗೆ ಥಳಿಸಿದ ದುಷ್ಕರ್ಮಿಗಳು

Update: 2019-06-28 10:00 GMT

ರಾಜ್‍ಕೋಟ್, ಜೂ.28: ಗುಜರಾತ್ ನ ಗಿರ್ ಸೋಮನಾಥ್ ಜಿಲ್ಲೆಯ ಉನಾ ಪಟ್ಟಣದಲ್ಲಿ ಗುರುವಾರ 29 ವರ್ಷದ ದಲಿತ ಯುವಕನಿಗೆ ಆತನ ಹಿರಿಯ ಸೋದರನ ಹಂತಕ ಸಹಿತ ಇಬ್ಬರು ವ್ಯಕ್ತಿಗಳು ಥಳಿಸಿದ ಘಟನೆ ವರದಿಯಾಗಿದೆ.

ಬೈಕ್ ನಲ್ಲಿ ಉನಾ ಪಟ್ಟಣದ ಟವರ್ ಚೌಕ್ ಸಮೀಪ ಹಾದು ಹೋಗುತ್ತಿದ್ದಾಗ ಆರೋಪಿಗಳಾದ ಅರ್ಷಿ ಭಿಖಾಭಾಯಿ ವಾಜ ಹಾಗೂ ಅರ್ಜಣ್ ಬಾಬುಭಾಯಿ ಮಕ್ವಾನ  ತಮ್ಮ ಮೋಟಾರ್ ಸೈಕಲನ್ನು  ಬೈಕಿಗೆ ಢಿಕ್ಕಿ ಹೊಡೆಸಿದ್ದರು. ನಂತರ ಶರ್ಟ್ ಕಾಲರ್ ಹಿಡಿದೆಳೆದು ನಿಂದಿಸಿ  ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಪಿಯೂಷ್ ಸರ್ವಯ್ಯ ಆರೋಪಿಸಿದ್ದಾರೆ.

ಪಿಯೂಷ್ ಓಡಲೆತ್ನಿಸಿದರೂ ಇಬ್ಬರೂ ಆತನನ್ನು ಬೆಂಬತ್ತಿ ಮತ್ತೆ ಜಗಳಕ್ಕೆ ನಿಂತಿದ್ದೇ ಅಲ್ಲದೆ ತಮಗೆ ಜೀವಾವಧಿ ಶಿಕ್ಷೆಯಾಗಿದೆ ಹಾಗೂ ಇನ್ನಷ್ಟು ಶಿಕ್ಷೆಗೆ ಅಂಜುವುದಿಲ್ಲ ಎಂದರೆಂದು ದೂರಲಾಗಿದೆ.

ಸ್ಥಳಕ್ಕೆ ಪಿಯೂಷ್ ಸ್ನೇಹಿತ ಆಗಮಿಸಿದಾಗ  ಹಾಗೂ ಜನರು  ಸೇರಿದಾಗ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದರು. ಪಿಯೂಷ್ ಸೋದರ ಲಾಲ್ಜಿ ಎಂಬಾತನನ್ನು ಉನಾ ತಾಲೂಕಿನ ಅಂಕೋಲಲಿ ಗ್ರಾಮದಲ್ಲಿ 2012ರಲ್ಲಿ ಬೆಂಕಿ ಹಚ್ಚಿ ಅರ್ಜನ್ ಸಹಿತ 11 ಮಂದಿ ಸಾಯಿಸಿದ್ದರು. ಆತ ಭಿಖಾಭಾಯಿ ವಾಜಾ ಪುತ್ರಿಯೊಂದಿಗೆ ಪರಾರಿಯಾಗಿದ್ದಾನೆಂದು ಆರೋಪಿಸಿ ಈ ಹತ್ಯೆ ನಡೆಸಲಾಗಿತ್ತು.

ಈ ಪ್ರಕರಣದಲ್ಲಿ ನ್ಯಾಯಾಲಯ ಬಿಖಾಭಾಯಿ ವಾಜ, ಆತನ ಸೋದರ ಹಾಗೂ ಪುತ್ರ ರಾಮಭಾಯಿಯನ್ನು ಅಪರಾಧಿಗಳೆಂದು ಘೋಷಿಸಿತ್ತು. ಬಾಲು ವಜಾ ಆಲಿಯಾಸ್ ಬಾಲು ಮಕ್ವಾನ ಹಾಗೂ ಆತನ ಪುತ್ರ ಅರ್ಜನ್ ಕೂಡ ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿತ್ತು. ಗುರುವಾರದ ಹಲ್ಲೆ ಘಟನೆಯ ಇನ್ನೊಬ್ಬ ಆರೋಪಿ ಅರ್ಷಿ  ಎಂಬಾತ ಭಿಖಾಭಾಯಿ ವಾಜಾನ ಪುತ್ರನಾಗಿದ್ದಾನೆ.

ತನ್ನ ಸೋದರನ ಕೊಲೆಯ ನಂತರ ಪಿಯೂಷ್ ಕುಟುಂಬ ಗ್ರಾಮವನ್ನು ತೊರೆದಿತ್ತು. ಗುರುವಾರದ ಘಟನೆ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News