4 ವರ್ಷದ ಬಾಲಕಿಯ ಹತ್ಯೆ: ಬಕೆಟಿನಲ್ಲಿ ಮೃತದೇಹ ಪತ್ತೆ

Update: 2019-06-28 11:25 GMT

ಚೆನ್ನೈ : ಮನೆಯಲ್ಲಿ ಒಬ್ಬಂಟಿಯಾಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಕೊಲೆಗೈದು ಆಕೆಯ ಮೃತದೇಹವನ್ನು ಹಂತಕ ಅಕ್ಕಿಯ ಪ್ಲಾಸ್ಟಿಕ್ ಗೋಣಿಯಲ್ಲಿ ಹಾಕಿ ಶೌಚಾಲಯದ ಬಕೆಟ್‍ನಲ್ಲಿರಿಸಿದ ಘಟನೆ ನಗರದ ತಿರುಮುಲ್ಲೈವೊಯಲ್ ಎಂಬಲ್ಲಿ ಗುರುವಾರ ವರದಿಯಾಗಿದೆ.

ಬಾಲಕಿಯ ಹತ್ಯೆಗೈಯ್ಯುವ ಮುನ್ನ ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆದಿರಬೇಕೆಂದು ಶಂಕಿಸಲಾಗಿದ್ದು, ಪೊಲೀಸರು ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ. ಘಟನೆ ಸಂಬಂಧ ಬಾಲಕಿಯ ನೆರೆಮನೆಯ 60 ವರ್ಷದ ಮಾಜಿ ಸೇನಾ ಸಿಬ್ಬಂದಿಯೊಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿಯಿದ್ದರೂ ಆತ ಇನ್ನು ಕೊಲೆ ನಡೆಸಿದ್ದನ್ನು ಒಪ್ಪಿಕೊಂಡಿಲ್ಲ ಎಂದು ತಿಳಿದುಬಂದಿದೆ.

ಘಟನೆ ನಡೆದ ಸಂದರ್ಭ  ಬಾಲಕಿಯ ತಂದೆ ಅಂಬತ್ತೂರಿನಲ್ಲಿ ಖಾಸಗಿ ಕಂಪೆನಿಯಲ್ಲಿನ ತನ್ನ ಉದ್ಯೋಗ ಸ್ಥಳಕ್ಕೆ ಹೋಗಿದ್ದರೆ ತಾಯಿ ಆಕೆಯ 8 ವರ್ಷದ ಸೋದರನನ್ನು ಹತ್ತಿರದ ಟ್ಯೂಷನ್ ತರಗತಿಗೆ ಕರೆದುಕೊಂಡು ಹೋಗಿದ್ದರು. ಸಂಜೆ ಐದು ಗಂಟೆಗೆ ಹೊರ ಹೋಗಿದ್ದ ಬಾಲಕಿಯ ತಾಯಿ 5.15ಕ್ಕೆ ಮನೆಗೆ ಬಂದಾಗ ಬಾಲಕಿ ಕಾಣದೇ ಇರುವುದನ್ನು ಕಂಡು ಕಂಗಾಲಾಗಿ ಹುಡುಕಿದಾಗ ಶೌಚಾಲಯದಲ್ಲಿ ಬಾಲಕಿಯ ಮೃತ ದೇಹ ಕಂಡು ಆಘಾತಗೊಂಡಿದ್ದರು.

ಘಟನೆ ಸಂಬಂಧ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿರುವ ವ್ಯಕ್ತಿ ಕುಟುಂಬದ ಸಂಬಂಧಿಯೆಂದೂ ಹೇಳಲಾಗಿದೆ. ಆತ ಬಾಲಕಿಯನ್ನು ಹುಡುಕಲು ಆಕೆಯ ತಾಯಿಗೆ ಸಹಾಯ ಕೂಡ ಮಾಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆತನ ವಿರುದ್ಧ ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News