ಕ್ರಿಶ್ಚಿಯನ್ ಸಂಸ್ಥೆಗಳು ಉತ್ಕೃಷ್ಟ ಶಿಕ್ಷಣಕ್ಕೆ ಮಾದರಿ: ಪ್ರೊ.ಯಡಪಡಿತ್ತಾಯ

Update: 2019-06-28 12:12 GMT

ಮಂಗಳೂರು, ಜೂ.28: ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕ್ರಿಶ್ಚಿಯನ್ ಸಂಸ್ಥೆಗಳು ಮುಂಚೂಣಿಯಲ್ಲಿರುತ್ತವೆ. ಜತೆಗೆ, ಉತ್ಕೃಷ್ಟತೆಯ ಶಿಕ್ಷಣಕ್ಕೆ ಮಾದರಿಯಾಗಿವೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿವಿ ಕಾಲೇಜು ಶಿಕ್ಷಕರ ಸಂಘದ ಸಹಯೋಗದಲ್ಲಿ ರಾಜ್ಯ ವಿವಿ ಹಾಗೂ ಕಾಲೇಜು ಶಿಕ್ಷಕರ ಸಂಘ, ಅಖಿಲ ಭಾರತ ವಿವಿ ಹಾಗೂ ಕಾಲೇಜು ಶಿಕ್ಷಕರ ಸಂಘ, ಸಂತ ಆಗ್ನೆಸ್ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ನಗರದ ಸಂತ ಆಗ್ನೆಸ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ‘ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಿಬಿಸಿಎಸ್ ಮತ್ತು ಮೂಕ್ ಕುರಿತ ಒಳನೋಟ’ ರಾಷ್ಟ್ರೀಯ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ‘ನ್ಯಾಕ್’ನಿಂದ ‘ಎ’ ಗ್ರೇಡ್ ಲಭಿಸಿದ್ದರೆ, ಸಂತ ಆಗ್ನೇಸ್ ಕಾಲೇಜಿಗೆ ‘ಎ+’ ಗ್ರೇಡ್ ಪಡೆದುಕೊಂಡಿರುವುದೇ ಇದಕ್ಕೆ ಉತ್ಕೃಷ್ಟ ಶಿಕ್ಷಣಕ್ಕೆ ನಿದರ್ಶನವಾಗಿದೆ. ಮೊದಲಿನಿಂದಲೂ ಕ್ರಿಶ್ಚಿಯನ್ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ್ದು, ತಮ್ಮದೇಆದ ಕೊಡಗೆಗಳನ್ನು ನೀಡಿವೆ ಎಂದು ಕುಲಪತಿ ತಿಳಿಸಿದರು.

ನೂತನವಾಗಿ ಜಾರಿಗೆ ಬರಲಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಕರಡು) 2019ರಲ್ಲಿ ಆಯ್ಕೆ ಆಧರಿತ ಶಿಕ್ಷಣ ವ್ಯವಸ್ಥೆ (CBCS) ಹಾಗೂ ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್ (MOOC)ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಸಿಬಿಸಿಎಸ್‌ನಿಂದ ಮಕ್ಕಳಿಗೆ ಅನುಕೂಲಕರವಾಗಲಿದೆ. ಮಕ್ಕಳ ಇಷ್ಟ, ಆಸಕ್ತಿ, ಆಯ್ಕೆಗಳಿಗನುಗುಣವಾಗಿ ಪೋಷಕರು ಶಿಕ್ಷಣ ಒದಗಿಸಲು ಪ್ರೋತ್ಸಾಹದಾಯಕವಾಗಿದೆ ಎಂದು ಹೇಳಿದರು.

ಇನ್ನು, ಆಧುನಿಕ ಯುಗದಲ್ಲಿ ಎಲ್ಲವೂ ಆನ್‌ಲೈನ್‌ಮಯವಾಗುತ್ತಿದೆ. ಜಗತ್ತು ಸ್ಮಾರ್ಟ್ ಆಗುತ್ತಿದೆ. ನಾವೂ ಸ್ಮಾರ್ಟ್ ಆಗಬೇಕು. ಜತೆಗೆ ವಿದ್ಯಾರ್ಥಿಗಳನ್ನೂ ಪೋಷಕರು ಹಾಗೂ ಶಿಕ್ಷಕರು ಸ್ಮಾರ್ಟ್ ಆಗಿಸಲು ಶ್ರಮಿಸಬೇಕು. ಆನ್‌ಲೈನ್ ಕೋರ್ಸ್‌ಗಳು ಇಂದಿನ ಟ್ರೆಂಡಿಂಗ್ ಆಗಿವೆ. ಆನ್‌ಲೈನ್ ಕೋರ್ಸ್‌ಗೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಂತ ಆಗ್ನೇಸ್ ಕಾಲೇಜಿನಲ್ಲಿ ಸಿಬಿಸಿಎಸ್ ಮತ್ತು ಆನ್‌ಲೈನ್ ಕೋರ್ಸ್‌ಗಳಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಇಂದಿನ ಶಿಕ್ಷಣ ವ್ಯವಸ್ಥೆಯು ಅಂಕಗಳಿಗೆ ಮುಗಿಬಿದ್ದಿದೆ. ಪೋಷಕರು ಕೂಡ ತಮ್ಮ ಮಕ್ಕಳಿಗೆ ಇಷ್ಟದ ಶಿಕ್ಷಣ ನೀಡುವ ಬದಲು, ಹೆಚ್ಚು ಅಂಕಗಳನ್ನು ಗಳಿಸುವ ಯಂತ್ರದಂತೆ ಕಾಣುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆ ಬದಲಾಗುವ ಅಗತ್ಯವಿದೆ. ಜಗತ್ತು ಬದಲಾವಣೆಯನ್ನು ಬಯಸುತ್ತಿರುವಾಗ ನಾವು ಹಳೆಯ ಪದ್ಧತಿಗೆ ಜೋತುಬಿದ್ದರೆ ಹಿಂದುಳಿವಿಕೆಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಕೋರ್ಸ್‌ಗೆ ಪ್ರಾಧಾನ್ಯತೆ ಇದೆ ಎಂದು ಸ್ಪಷ್ಟಪಡಿಸಿದರು.

ಕರಡು ಹಂತದಲಿನ ರಾಷ್ಟ್ರೀಯ ಶಿಕ್ಷಣ ನೀತಿಯು ಮೂರನೇ ಹಂತದ ಕಾಯ್ದೆ. ಈ ಮೊದಲು 1968, 1986 (1992-ಪರಿಷ್ಕೃತ) ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿತ್ತು. ಸದ್ಯ 2019ರ ಕಾಯ್ದೆಯು ಗುಣಮಟ್ಟದಿಂದ ಕೂಡಿರುವಂತಿದೆ. ಹೊಸ ಶಿಕ್ಷಣ ನೀತಿಯನ್ನು 484 ಪುಟಗಳಲ್ಲಿ ವಿವರಿಸಲಾಗಿದೆ. ಪ್ರತೀ ಶಿಕ್ಷಕ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಈ ಮೊದಲು ಶಿಕ್ಷಕರಿಗೆ ಗುಣಮಟ್ಟದ ಕಲಿಕೆ ನೀಡುವ ಬಗ್ಗೆ ದುಂಬಾಲು ಬೀಳಲಾಗುತ್ತಿತ್ತು. ಇನ್ನು ಅದು ತಪ್ಪಲಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಕರು ಸ್ಮಾರ್ಟ್ ಆಗಿರಬೇಕು ಎಂದು ಹೇಳಿದರು.

ಸಂತ ಆಗ್ನೆಸ್ ಕಾಲೇಜಿನಿಂದ ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಅವರನ್ನು ಶಾಲು ಹೊದಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣದ ಮಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಅಪ್ಪಾಜಿಗೌಡ ಬಿ.ಎಸ್., ಸಂತ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ.ಜೆಸ್ವಿನಾ ಎ.ಸಿ. ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂತ ಆಗ್ನೆಸ್ ಕಾಲೇಜಿನ ಡಾ.ವೆನಿಸ್ಸಾ, ಚಂದ್ರಶೇಖರ್, ಜಾಸ್ಟಿನ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು. ಸಂತ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಂಗಳೂರು ವಿವಿ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಎನ್.ಎಂ.ಜೋಸೆಫ್ ಸ್ವಾಗತಿಸಿದರು. ಡಾ.ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿವಿ ಕಾಲೇಜು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ವಿಶಾಲಾ ಬಿ.ಕೆ. ವಂದಿಸಿದರು. ಕಾರ್ಯಕ್ರಮದ ಬಳಿಕ ವಿಚಾರಗೋಷ್ಠಿಗಳು ಮುಂದುವರಿದವು.

ಮಂಗಳೂರು ವಿವಿಯಲ್ಲಿ ದತ್ತಾಂಶ ಕೇಂದ್ರ ಆರಂಭ

ಭಾರತವು ಡಿಜಿಟಲ್‌ಮಯವಾಗುತ್ತಿದೆ. ಎಲ್ಲ ಮಾಹಿತಿಯೂ ಕ್ಷಣಮಾತ್ರದಲ್ಲಿ ಕೈಸೇರುವ ತಂತ್ರಜ್ಞಾನ ಲಭ್ಯವಿದ್ದು, ಸಂಪನ್ಮೂಲಗಳ ಸದ್ಬಳಕೆಯಾಗಬೇಕು. ದೇಶವ್ಯಾಪ್ತಿ ಇ-ಆಡಳಿತಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲೂ ದತ್ತಾಯ ಕೇಂದ್ರವನ್ನು ತೆರೆಯುವ ಚಿಂತನೆ ಇದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಬರುವ ದ.ಕ. ಉಡುಪಿ, ಕೊಡಗು ಜಿಲ್ಲೆಯ ಕಾಲೇಜುಗಳ ಎಲ್ಲ ಮಾಹಿತಿಯನ್ನು ದತ್ತಾಂಶ ಕೇಂದ್ರಕ್ಕೆ ತರಿಸಿಕೊಳ್ಳಲಾಗುವುದು. ವಿವಿ ವ್ಯಾಪ್ತಿಯಲ್ಲಿ 210 ಕಾಲೇಜುಗಳು, ಐದು ಸ್ವಾಯತ್ತ ಕಾಲೇಜುಗಳು, ಹಲವು ಪಿಜಿ ಸೆಂಟರ್‌ಗಳು ಬರಲಿವೆ ಎಂದು ಹೇಳಿದರು.

ಯಾವುದೇ ಮಾಹಿತಿ ತಕ್ಷಣವೇ ಬೇಕು ಎಂದರೆ ಸಿಗುತ್ತಿರಲಿಲ್ಲ. ಕೆಲದಿನ ಮೊದಲೇ ಸೂಚನೆ ನೀಡಿ, ಮಾಹಿತಿ ತರಿಸಿಕೊಳ್ಳುವ ದಿನಗಳಿದ್ದವು. ಮುಂದಿನ ದಿನಗಳಲ್ಲಿ ಇಂತಹ ಸ್ಥಿತಿ ಇರುವುದಿಲ್ಲ. ಎಲ್ಲ ಮಾಹಿತಿಯನ್ನೂ ವಿವಿಯ ದತ್ತಾಂಶ ಕೇಂದ್ರದಲ್ಲಿ ಸಂಗ್ರಹಿಸಲಾಗುವುದು. ದತ್ತಾಂಶ ಕೇಂದ್ರಕ್ಕೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಕುಲಪತಿ ಮಾಹಿತಿ ನೀಡಿದರು.

ಸಿಬಿಸಿಎಸ್ ಶಿಕ್ಷಣವು ಇಂದಿನ ಟ್ರೆಂಡಿಂಗ್ ಆಗಿದೆ. ನೂತನ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ಸ್ವಯಂ ಪ್ರೇರಣೆಯಿಂದ ಕಾಲೇಜುಗಳಿಗೆ ಕೊಡುಗೆ ನೀಡಬಹುದು. ಶಿಕ್ಷಕರು ಕಲಿಸುವ ವಿಧಾನದಲ್ಲಿ ಸೃಜನಶೀಲತೆ ಅಳವಡಿಸಿಕೊಳ್ಳಬೇಕು. ಶಿಕ್ಷಕರು ವಿವಿಧ ಆಯಾಯಗಳಿಂದ ಹೆಚ್ಚಿನ ಮಾಹಿತಿಯನ್ನು ಹೆಕ್ಕಿ ತೆಗೆದು ವಿದ್ಯಾರ್ಥಿಗಳಿಗೆ ಜ್ಞಾನಭಂಡಾರಕೆಕ ಧಾರೆ ಎರೆಯಬೇಕು.

ಪ್ರೊ.ಎ.ಎಂ.ಖಾನ್
- ರಿಜಿಸ್ಟ್ರಾರ್, ಮಂಗಳೂರು ವಿಶ್ವವಿದ್ಯಾನಿಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News