ಎಲ್ಲಾ ನಾಣ್ಯಗಳನ್ನು ಸ್ವೀಕರಿಸಬೇಕು: ಆರ್‌ಬಿಐ ಸ್ಪಷ್ಟನೆ

Update: 2019-06-28 14:51 GMT

ಮುಂಬೈ, ಜೂ.28: ಕಾನೂನು ಬದ್ಧ ಚಲಾವಣೆಯಾಗಿರುವ 50 ಪೈಸೆ ಹಾಗೂ ಹೆಚ್ಚಿನ ಮುಖಬೆಲೆಯ ಎಲ್ಲಾ ನಾಣ್ಯಗಳನ್ನು ಸ್ವೀಕರಿಸಬೇಕು ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ. ಅಲ್ಲದೆ ನಾಣ್ಯಗಳನ್ನು ಸ್ವೀಕರಿಸಬೇಕು . ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಲ್ಲಾ ಬ್ಯಾಂಕ್ ಶಾಖೆಗಳಿಗೂ ಸೂಚಿಸಿದೆ.

 ಜನರ ವ್ಯವಹಾರಕ್ಕೆ ಅನುಕೂಲವಾಗುವಂತೆ ಆಯಾ ಕಾಲಕ್ಕೆ ಹೊಸ ಮುಖಬೆಲೆಯ ನಾಣ್ಯಗಳನ್ನು ಚಲಾವಣೆ ಮಾಡಲಾಗುತ್ತದೆ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ವಿಷಯಗಳಿಗನುಗುಣವಾಗಿ ಒಂದೇ ಮುಖಬೆಲೆಯ ನಾಣ್ಯಗಳನ್ನು ಹೊಸ ವಿನ್ಯಾಸದೊಂದಿಗೆ ಚಲಾವಣೆಗೆ ತರಲಾಗುತ್ತದೆ. ನಾಣ್ಯಗಳು ಸುದೀರ್ಘಾವಧಿಯಲ್ಲಿ ಚಲಾವಣೆಯಲ್ಲಿ ಉಳಿಯುವ ಕಾರಣ ವಿವಿಧ ವಿನ್ಯಾಸದ ನಾಣ್ಯಗಳು ಚಲಾವಣೆಯಲ್ಲಿ ಉಳಿದುಕೊಳ್ಳುತ್ತವೆ. ಈಗ 50 ಪೈಸೆ, 1, 2, 5 ಮತ್ತು 10 ರೂ. ಮುಖಬೆಲೆಯ ನಾಣ್ಯಗಳು ವಿವಿಧ ಗಾತ್ರ, ವಿನ್ಯಾಸದಲ್ಲಿ ಚಲಾವಣೆಯಲ್ಲಿದ್ದು ಇವನ್ನು ಸ್ವೀಕರಿಸಬೇಕು ಎಂದು ಆರ್‌ಬಿಐ ತಿಳಿಸಿದೆ.

ಕೆಲವು ಅಂಗಡಿಗಳಲ್ಲಿ , ವ್ಯಾಪಾರಿಗಳಲ್ಲಿ ಹಾಗೂ ಬಸ್ಸುಗಳಲ್ಲಿ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ ಎಂದು ಆರ್‌ಬಿಐಗೆ ಹಲವಾರು ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಈ ಸೂಚನೆ ನೀಡಿದೆ. ಅಲ್ಲದೆ ಬ್ಯಾಂಕ್‌ಗಳು ನಾಣ್ಯಗಳನ್ನು ಸ್ವೀಕರಿಸುತ್ತಿವೆಯೇ ಎಂಬುದನ್ನು ಖಾತರಿಗೊಳಿಸಲು ಬ್ಯಾಂಕ್‌ನ ಪ್ರಾದೇಶಿಕ ಅಥವಾ ವಲಯ ಮ್ಯಾನೇಜರ್‌ಗಳು ಬ್ಯಾಂಕ್‌ಗಳ ಶಾಖೆಗಳಿಗೆ ಹಠಾತ್ ಭೇಟಿ ನೀಡಬೇಕು ಮತ್ತು ಆರ್‌ಬಿಐ ಸೂಚನೆಯನ್ನು ಉಲ್ಲಂಘಿಸಿರುವುದು ಗಮನಕ್ಕೆ ಬಂದರೆ ತಕ್ಷಣ ವರದಿ ಮಾಡಬೇಕು ಎಂದು ಆರ್‌ಬಿಐ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News