ಚಂದ್ರ ಬಾಬು ನಾಯ್ಡು ಖಾಸಗಿ ನಿವಾಸ ಅಕ್ರಮ ಎಂದ ಆಂಧ್ರಪ್ರದೇಶ ಸರಕಾರ

Update: 2019-06-28 15:30 GMT

ಹೈದರಾಬಾದ್, ಜೂ. 28: ಮಾಜಿ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರು ವಾಸಿಸುತ್ತಿರುವ ಖಾಸಗಿ ನಿವಾಸ ಕಾನೂನು ಬಾಹಿರ ಎಂದು ಘೋಷಿಸಿರುವ ಆಂಧ್ರಪ್ರದೇಶ ಸರಕಾರ, ಅದನ್ನು ತೆರವುಗೊಳಿಸುವಂತೆ ನಾಯ್ಡು ಅವರಿಗೆ ನೋಟಿಸು ಜಾರಿ ಮಾಡಿದೆ.

ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈ ನಿವಾಸವನ್ನು ತೆರವುಗೊಳಿಸುವಂತೆ ನೋಟಿಸು ಜಾರಿ ಮಾಡಲಾಗಿದೆ. ಇದಲ್ಲದೆ, ಕೃಷ್ಣಾ ನದಿ ದಂಡೆಯಿಂದ 100 ಮೀಟರ್‌ಗಿಂತ ಕಡಿಮೆ ದೂರದಲ್ಲಿ ನಿರ್ಮಿಸಲಾದ ಇತರ ಒಟ್ಟು 28 ಕಟ್ಟಡಗಳಿಗೆ ನೋಟಿಸು ಜಾರಿ ಮಾಡಲಾಗಿದೆ. ಕಳೆದ ವಾರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪ್ರಜಾವೇದಿಕೆ ಕಾನೂನು ಬಾಹಿರವೆಂದು ಘೋಷಿಸಿದ್ದರು ಹಾಗೂ ಅದನ್ನು ಧ್ವಂಸಗೊಳಿಸುವಂತೆ ಆದೇಶಿಸಿದ್ದರು.

ಕೃಷ್ಣಾ ನದಿ ದಂಡೆಯಲ್ಲಿ ನಿರ್ಮಿಸುವ ಮೂಲಕ ಈ ಕಟ್ಟಡ 1884ರ ನದಿ ಸಂರಕ್ಷಣೆ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಹೇಳಲಾಗಿತ್ತು. ನದಿ ಸಂರಕ್ಷಣೆ ಕಾಯ್ದೆ ಪ್ರಕಾರ ನದಿ ದಂಡೆಯ 500 ಮೀಟರ್ ಒಳಗಡೆ ಯಾವುದೇ ಕಟ್ಟಡ ನಿರ್ಮಾಣ ಮಾಡಬಾರದು. ನಾಯ್ಡು ಅವರ ಖಾಸಗಿ ನಿವಾಸ ಕೂಡ ಕಾನೂನು ಬಾಹಿರ. ಅದನ್ನು ಕೂಡಲೇ ತೆರವುಗೊಳಿಸಬೇಕಾದ ಅಗತ್ಯ ಇದೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯ ಸಭಾ ಸದಸ್ಯ ವಿಜಯಸಾಯಿ ರೆಡ್ಡಿ ಹೇಳಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಜಗನ್ ಮೋಹನ್ ರೆಡ್ಡಿ, ನದಿ ದಂಡೆಯಲ್ಲಿರುವ ಎಲ್ಲ ಕಾನೂನು ಬಾಹಿರ ಕಟ್ಟಡಗಳನ್ನು ಕೆಡವಲಾಗುವುದು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News