ಗುಂಡಿನ ಚಕಮಕಿ: ಜೆಇಎಂನ ಉಗ್ರ ಹತ
ಶ್ರೀನಗರ, ಜೂ. 28: ಜಮ್ಮು ಹಾಗೂ ಕಾಶ್ಮೀರದ ಬುಡ್ಗಾಂವ್ ಜಿಲ್ಲೆಯಲ್ಲಿ ಭದ್ರತಾ ಪಡೆ ಶುಕ್ರವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್‌ನ ಓರ್ವ ಶಂಕಿತ ಉಗ್ರ ಹತನಾಗಿದ್ದಾನೆ. ಉಗ್ರರು ಇರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಕೇಂದ್ರ ಕಾಶ್ಮೀರದ ಬುಡ್ಗಾಂವ್ ಜಿಲ್ಲೆಯ ಕ್ರಾಲ್‌ಪೋರಾ ಚಕ್‌ಪೋರಾವನ್ನು ಭದ್ರತಾ ಪಡೆ ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆ ಸಂದರ್ಭ ಉಗ್ರರು ಭದ್ರತಾ ಪಡೆಯ ಯೋಧರ ಮೇಲೆ ಗುಂಡು ಹಾರಿಸಿದರು. ಯೋಧರು ಪ್ರತಿ ದಾಳಿ ನಡೆಸಿದರು. ಇದರಿಂದ ಗುಂಡಿನ ಚಕಮಕಿ ನಡೆಯಿತು. ಅನಂತರ ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಉಗ್ರನೋರ್ವನ ಮೃತದೇಹ ಪತ್ತೆಯಾಗಿದೆ. ಹತನಾದ ಉಗ್ರನನ್ನು ಪಾಕಿಸ್ತಾನದ ಝರಾರ್ ಎಂದು ಗುರುತಿಸಲಾಗಿದೆ. ಈತ ಜೈಶೆ ಮುಹಮ್ಮದ್ ಉಗ್ರ ಸಂಘಟನೆಗೆ ಸೇರಿದವನು ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಶಸ್ತ್ರಾಸ್ತ್ರ, ಸ್ಫೋಟಕಗಳು ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಸಾಹಿತ್ಯದ ಪುಸ್ತಕಗಳು ಲಭ್ಯವಾಗಿವೆ.