‘ಟೈಮ್ಸ್ ಆಫ್ ಇಂಡಿಯಾ’, ‘ದಿ ಹಿಂದು’, ಟೆಲಿಗ್ರಾಫ್ ಪತ್ರಿಕೆಗಳಿಗೆ ಜಾಹೀರಾತು ಕಡಿತಗೊಳಿಸಿದ ಮೋದಿ ಸರಕಾರ
ಹೊಸದಿಲ್ಲಿ, ಜೂ.28: ಕನಿಷ್ಟ ಮೂರು ಪ್ರಮುಖ ದಿನಪತ್ರಿಕೆಗಳಿಗೆ ನೀಡುವ ಜಾಹೀರಾತಿನಲ್ಲಿ ಮೋದಿ ಸರಕಾರ ಕಡಿತಗೊಳಿಸಿದೆ. ಸರಕಾರದ ವಿರುದ್ಧ ವರದಿಗಳನ್ನು ಪ್ರಕಟಿಸಿರುವುದಕ್ಕೆ ಪ್ರತೀಕಾರವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ದೂರಿವೆ.
‘ಟೈಮ್ಸ್ ಆಫ್ ಇಂಡಿಯಾ’ ಮತ್ತು ‘ಇಕನಾಮಿಕ್ ಟೈಮ್ಸ್’ ಪತ್ರಿಕೆಯ ನಿಯಂತ್ರಣ ಹೊಂದಿರುವ ಬೆನೆಟ್,ಕೋಲ್ಮನ್ ಆ್ಯಂಡ್ ಕೊ, ಎಬಿಪಿ ಗ್ರೂಪ್ ಮಾಲಕತ್ವದ ‘ದಿ ಟೆಲಿಗ್ರಾಫ್’ ಹಾಗೂ ಹಿಂದು ಗ್ರೂಪ್‌ನ ‘ದಿ ಹಿಂದು’ ಪತ್ರಿಕೆಗೆ ನೀಡುವ ಸರಕಾರಿ ಜಾಹೀರಾತಿನಲ್ಲಿ ಭಾರೀ ಕಡಿತ ಮಾಡಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈ ಮೂರು ಪತ್ರಿಕೆಗಳಿಗೆ ಒಟ್ಟಾಗಿ 2.6 ಕೋಟಿ ಓದುಗರಿದ್ದಾರೆ. ಈ ಪತ್ರಿಕೆಗಳು ಮೋದಿ ಸರಕಾರದ ನೀತಿಗಳನ್ನು ಪ್ರಶ್ನಿಸಿ ವರದಿಗಳನ್ನು ಮಾಡುವುದರಿಂದ ಅವುಗಳಿಗೆ ಸರಕಾರಿ ಜಾಹೀರಾತು ನೀಡದೆ ಸತಾಯಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಈ ಕುರಿತು ಮಾತನಾಡಿದ ‘ಟೈಮ್ಸ್ ಆಫ್ ಇಂಡಿಯಾ’ದ ಪ್ರತಿನಿಧಿಯೊಬ್ಬರು, ಟೈಮ್ಸ್ ಗ್ರೂಪ್‌ನ ಶೇ.15 ಜಾಹೀರಾತುಗಳು ಸರಕಾರದಿಂದ ಬರುತ್ತವೆ. ಈ ಜಾಹೀರಾತುಗಳು ಮುಖ್ಯವಾಗಿ ಸರಕಾರಿ ಟೆಂಡರ್‌ಗಳಾಗಿರುತ್ತವೆ ಮತ್ತು ಸರಕಾರ ಯೋಜನೆಗಳನ್ನು ಪ್ರಚಾರ ಮಾಡುವಂತದ್ದಾಗಿರುತ್ತವೆ ಎಂದು ತಿಳಿಸಿದ್ದಾರೆ. ಎಬಿಪಿ ಸಮೂಹದ ದಿ ಟೆಲಿಗ್ರಾಫ್ ಪತ್ರಿಕೆಗೂ ಶೇ.15 ಜಾಹೀರಾತು ಸರಕಾರದಿಂದಲೇ ಬರುತ್ತಿದ್ದು ಸದ್ಯ ಈ ಜಾಹೀರಾತಿಗೆ ಸರಕಾರ ಕತ್ತರಿ ಪ್ರಯೋಗಿಸಿದೆ.
“ ನಿಮ್ಮ ಪತ್ರಿಕೆಯ ಸಂಪಾದಕೀಯದಲ್ಲಿ ನೀವು ಸರಕಾರಕ್ಕೆ ಬೇಕಾದಂತೆ ಬರೆಯದೆ ಅದರ ವಿರುದ್ಧ ಬರೆದರೆ ಅವರು ಜಾಹೀರಾತು ತಡೆಹಿಡಿಯುವ ಮೂಲಕ ನಿಮಗೆ ತೊಂದರೆ ನೀಡುತ್ತಾರೆ” ಎಂದು ಎಬಿಪಿ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ನಳಿನ್ ಕೊಹ್ಲಿ, ಸರಕಾರದ ವಿರುದ್ಧ ಅನೇಕ ದಿನ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಸಾಕಷ್ಟು ವರದಿಗಳನ್ನು ಪ್ರಕಟಿಸಿವೆ. ಇದು ವಾಕ್‌ಸ್ವಾತಂತ್ರದ ಪ್ರಮಾಣೀಕರಣವಾಗಿದೆ. ಬಿಜೆಪಿ ಸರಕಾರ ಪ್ರೆಸ್‌ನ ಗಂಟಲು ಹಿಸುಕುತ್ತಿದೆ ಎನ್ನುವುದು ಸುಳ್ಳು ಎಂದು ತಿಳಿಸಿದ್ದಾರೆ.