ದೇಶದಲ್ಲಿ ದಿನಕ್ಕೆ ಏಳು ಮಂದಿ ಮಲಿನ ನೀರಿಗೆ ಬಲಿ !

Update: 2019-06-29 03:48 GMT

ಹೊಸದಿಲ್ಲಿ: ಭಾರತದಲ್ಲಿ ಲಕ್ಷಾಂತರ ಮಂದಿ ನೀರಿನ ಅಭಾವ ಎದುರಿಸುತ್ತಿರುವ ಸುದ್ದಿ ವಿಶ್ವದ ಗಮನ ಸೆಳೆದಿದ್ದರೆ, ನೀರಿನ ಲಭ್ಯತೆ ಇರುವ ಜನರ ಪರಿಸ್ಥಿತಿ ಬಗೆಗಿನ ಸುದ್ದಿ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ.

ಸಾಕಷ್ಟು ಲಸಿಕೆ ಹಾಗೂ ಔಷಧಿ ಲಭ್ಯವಿದ್ದರೂ, ಮಲಿನ ನೀರಿನಿಂದಾಗಿ ಕಳೆದ ವರ್ಷ ಪ್ರತಿ ದಿನ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಲಿನ ನೀರು ಸೇವಿಸಿದ್ದರಿಂದ ಅಸ್ವಸ್ಥರಾಗುವ 36 ಸಾವಿರ ಮಂದಿಗೆ ಪ್ರತಿದಿನ ಚಿಕಿತ್ಸೆ ನೀಡಲಾಗುತ್ತಿದೆ !

ನೀರಿನಿಂದ ಹರಡುವ ರೋಗಗಳಾದ ಕಾಲರಾ, ತೀವ್ರ ದ್ರವಾಂಶ ಕೊರತೆ ಕಾಯಿಲೆ (ಎಡಿಡಿ), ಟೈಫಾಯ್ಡ್  ಮತ್ತು ವೈರಲ್ ಹೆಪಟೈಟಿಸ್‌ನಿಂದ 2018ರಲ್ಲಿ ಭಾರತದಲ್ಲಿ 2439 ಮಂದಿ ಮೃತಪಟ್ಟಿದ್ದಾರೆ. ಈ ಕಾಯಿಲೆಗಳಿಗೆ 1.3 ಕೋಟಿ ಮಂದಿ ಚಿಕಿತ್ಸೆ ಪಡೆದಿದ್ದಾರೆ.

ಸೆಂಟ್ರಲ್ ಬ್ಯೂರೊ ಆಫ್ ಹೆಲ್ತ್ ಇಂಟೆಲಿಜೆನ್ಸ್ ವಿಭಾಗ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪಡೆದ ಅಂಕಿ ಅಂಶಗಳ ಪ್ರಕಾರ, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಅತಿಯಾಗಿ ಬಾಧಿಸುವ ಈ ಸಮಸ್ಯೆಗೆ ಬಲಿಯಾದವರಲ್ಲಿ ಶೇಕಡ 60ರಷ್ಟು ಮಂದಿ (1450) ಮಕ್ಕಳು.

ಕಳೆದ ಐದು ವರ್ಷಗಳಲ್ಲಿ ಈ ರೋಗಗಳಿಗೆ 11,768 ಮಂದಿ ಜೀವ ಕಳೆದುಕೊಂಡಿದ್ದಾರೆ. ಅಂದರೆ ಪ್ರತಿ ನಾಲ್ಕು ಗಂಟೆಗೆ ಒಬ್ಬರಂತೆ ನೀರಿನಿಂದ ಹರಡುವ ರೋಗಗಳಿಗೆ ಬಲಿಯಾಗುತ್ತಿದ್ದಾರೆ. 7.6 ಕೋಟಿ ಮಂದಿ ಈ ಅವಧಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಎಡಿಡಿ ಅತಿಹೆಚ್ಚು ಜೀವಗಳನ್ನು ಬಲಿ ಪಡೆದಿದ್ದರೆ, ಹೆಪಟೈಟಿಸ್ ನಂತರದ ಸ್ಥಾನದಲ್ಲಿದೆ. 2018ರಲ್ಲಿ 584 ಮಂದಿ ಹೆಪಟೈಟಿಸ್‌ಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News