ಮಂಗಳೂರು: ವಿದ್ಯಾರ್ಥಿ ನಿಲಯ ಕೊರತೆ ನೀಗಿಸಲು ದಸಂಸ ಒತ್ತಾಯ

Update: 2019-06-29 10:18 GMT

ಮಂಗಳೂರು, ಜೂ.29: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯಗಳಲ್ಲಿ ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ಪ್ರವೇಶ ಬಯಸಿರುವ ನೂರಾರು ವಿದ್ಯಾರ್ಥಿಗಳು ಇಂದು ಅತಂತ್ರ ಸ್ಥಿತಿಯಲ್ಲಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಾರಿ ಹೊಸತಾಗಿ ಪ್ರವೇಶ ಬಯಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದು ದಸಂಸ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಆಗ್ರಹ ಮಾಡಿದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್, ನಗರದ ಬಾಲಕರ ವಿದ್ಯಾರ್ಥಿ ನಿಲಯ, ಕದ್ರಿ ಪದುವಾ ಹೈಸ್ಕೂಲ್ ಬಳಿ ವಿದ್ಯಾರ್ಥಿ ನಿಲಯ, ಉರ್ವಾ ಮಾರಿಗುಡಿ ಸಮೀಪದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಕೋಡಿಯಾಲ್‌ಬೈಲ್‌ನ ವಿದ್ಯಾರ್ಥಿ ನಿಲಯಗಳಲ್ಲಿ ಪ್ರಸಕ್ತ ಸಾಲಿಗೆ ಒಟ್ಟು 137 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈಗಾಗಲೇ ಈ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಮಿತಿಗಿಂತ ಅಧಿಕ ವಿದ್ಯಾರ್ಥಿಗಳು ಇರುವುದರಿಂದ ಹೊಸತಾಗಿ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇಲ್ಲವಾಗಿದೆ. ಇದರಿಂದಾಗಿ ಈ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಸುವ ಕನಸಿಗೆ ತೊಂದರೆಯಾಗಿದೆ. ಸರಕಾರ ಈ ಬಗ್ಗೆ ಗಮನ ರಿಸಬೇಕು ಎಂದವರು ಹೇಳಿದರು.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವರ್ಷ ಕಟ್ಟಡದ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯವನ್ನು ಸರಕಾರ ಒದಗಿಸಬೇಕು. ಆದರೆ ಸರಕಾರ ಮೂಲಭೂತ ಸೌಕರ್ಯದ ಸಮಸ್ಯೆ ಮುಂದಿಟ್ಟು 2013ರ ಜುಲೈ 20ರ ಆದೇಶವ್ನನು ಮಾರ್ಪಡಿಸಿ ಮಂಜೂರಾತಿ ಸಂಖ್ಯೆಗಿಂತ ಹೆಚ್ಚು ಪ್ರವೇಶ ಈಡದಂತೆ 27-08-2017ರಂದು ಆದೇಶ ಹೊರಡಿಸಿದೆ. ಇದರಿಂದ ಈ ಶೈಕ್ಷಣಿಕ ಅವಧಿಯಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಪ್ರವೇಶ ದೊರಕಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ತಕ್ಷಣ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುು ಅನಿವಾರ್ಯ ಎಂದವರು ಹೇಳಿದರು.

2018-19ನೆ ಸಾಲಿನ ಪ್ರೋತ್ಸಾಹ ಧನವೇ ಬಿಡುಗಡೆಯಾಗಿಲ್ಲ !

ಎಸೆಸೆಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯು ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯು ಕಳೆದ 2018-19ನೆ ಸಾಲಿನ ಪ್ರೋತ್ಸಾಹ ಧನ ನೀಡಲು ಹಣ ಬಿಡುಗಡೆ ಮಾಡಿಲ್ಲ. ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ಸೇರಿ ಜಿಲ್ಲೆಗೆ 2.56 ಕೋಟಿ ರೂ. ಸರಕಾರದಿಂದ ಬಿಡುಗಡೆಯಾಗಲು ಬಾಕಿ ಇದೆ ಎಂದು ಎಂ. ದೇವದಾಸ್ ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರು, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ, ಸಂಘಟನಾ ಸಂಚಾಲಕ ಭಾಸ್ಕರ್ ಎಂ., ತಾಲೂಕು ಸಂಚಾಲಕ ರುಕ್ಮಯ ಕಟೀಲು ಉಪಸ್ಥಿತರಿದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News