ಮಂಗಳೂರಿನಲ್ಲಿ ರಾಜೀವ್ ಗಾಂಧಿ ವಿವಿಯ ಪ್ರಾದೇಶಿಕ ಕೇಂದ್ರ ಶೀಘ್ರ ಆರಂಭ: ಕುಲಪತಿ ಡಾ. ಸಚ್ಚಿದಾನಂದ

Update: 2019-06-29 16:06 GMT

ಮಂಗಳೂರು, ಜೂ.29: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ(ರೀಜಿನಲ್ ಸೆಂಟರ್)ವನ್ನು ರಾಜ್ಯದ ನಾಲ್ಕು ಕಡೆಗಳಲ್ಲಿ ಆರಂಭಿಸಲಾಗುತ್ತಿದ್ದು, ಮಂಗಳೂರಿನ ಕಾವೂರಿನಲ್ಲಿ ಕೇಂದ್ರಕ್ಕಾಗಿ ಜಾಗವನ್ನು ಗುರುತಿಸಲಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಸಚ್ಚಿದಾನಂದ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ವಿವಿಯ 142ನೆ ಸಿಂಡಿಕೇಟ್ ಸಭೆಯು ಇಂದು ನಗರದ ಓಶಿಯನ್ ಪರ್ಲ್‌ನಲ್ಲಿ ನಡೆದಿದ್ದು, ಸಭೆಯ ಬಳಿಕ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು.

ದಾವಣಗೆರೆ, ಬೆಳಗಾಂ, ಗುಲ್ಬರ್ಗಾ ಹಾಗೂ ಮಂಗಳೂರಿನಲ್ಲಿ ಪ್ರತ್ಯೇಕ ಚಟುವಟಿಕೆಗಳಿಗೆ ಒತ್ತು ನೀಡಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮಂಗಳೂರಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನೊಂದಿಗೆ ಪ್ರಾದೇಶಿಕ ಕೇಂದ್ರ ರಚನೆಯಾಗಲಿದೆ. ಕಾವೂರಿನಲ್ಲಿ 2 ಎಕರೆ ಜಾಗವನ್ನು ಗುರುತಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ. ಶೀಘ್ರವೇ ಕೇಂದ್ರ ಆರಂಭವಾಗುವ ನಿರೀಕ್ಷೆ ಇದೆ. ಬೋಧಕ ವರ್ಗಕ್ಕೆ ತರಬೇತಿ ನೀಡುವ ಕಾರ್ಯವೂ ರೀಜಿನಲ್ ಸೆಂಟರ್‌ಗಳಲ್ಲಿ ವ್ಯವಸ್ತೆಯಾಗಲಿದೆ. ಈ ಕೇಂದ್ರ ಸ್ಥಾಪನೆಯಿಂದಾಗಿ ವಿವಿಧ ಕಾರ್ಯಗಳಿಗೆ ಕಾಲೇಜುಗಳು ಅಥವಾ ವಿದ್ಯಾರ್ಥಿಗಳು ಬೆಂಗಳೂರಿಗೆ ಅಲೆಯುವುದು ತಪ್ಪಲಿದೆ. ಆರೋಗ್ಯ ವಿಜ್ಞಾನಕ್ಕೆ ಸಂಬಂಧಿಸಿ ಉಡುಪಿ ಮತ್ತು ದ.ಕ. ಜಿಲ್ಲೆಯ 70 ಕಾಲೇಜುಗಳು ಹಾಗೂ ರಾಜ್ಯದಲ್ಲಿ ಒಟ್ಟು 700 ಕಾಲೇಜುಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಅಧೀನಕ್ಕೊಳಪಟ್ಟಿವೆ ಎಂದು ಅವರು ಹೇಳಿದರು.

ವೈದ್ಯಕೀಯ ಪದವೀಧರರಿಗೆ ಸಂಶೋಧನೆಗೆ ಪ್ರೋತ್ಸಾಹ
ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ರಾಜೀವ್ ಗಾಂಧಿ ವಿವಿಯಿಂದ ವೈದ್ಯಕೀಯ ಪದವೀಧರರಿಗೆ (ದ್ವಿತೀಯ ವರ್ಷದ ಎಂಬಿಬಿಎಸ್ ಪದವಿಯಲ್ಲಿ) ಸಂಶೋಧನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಹಾಯಧನವನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಕಾರ್ಯಕ್ಷೇತ್ರದ ಯಾವುದೇ ವಿಭಾಗದಲ್ಲಿ ಸಂಶೋದನೆ ಮಾಡಬಹುದಾಗಿದ್ದು, ಈ ಬಾರಿ 271 ಮಕ್ಕಳಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ಮಾತ್ರವಲ್ಲದೆ ಪ್ರತಿಭಾನ್ವಿತ ಹಾಗೂ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ನೀಡಲಾಗುತ್ತಿದೆ. ವಿವಿಗೆ ಸೇರುವ ವಿದ್ಯಾರ್ಥಿಗೆ ಆರೋಗ್ಯ ವಿಮೆ, ಪೋಷಕರ ಅಕಾಲಿಕ ಸಾವಿನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಓದು ಮುಂದುವರಿಸಲು ಅವಕಾಶ ನೀಡುವಂತೆಯೂ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ದೊರಕಿದೆ ಎಂದು ಅವರು ಹೇಳಿದರು.

ವಿವಿಯಿಂದ ಈ ವರ್ಷದಿಂದ ಪ್ರತಿ ವಿಷಯದ ಪದವಿಯಲ್ಲೂ ವಾರ್ಷಿಕ ಹಾಗೂ ಒಟ್ಟಾರೆ ಕೋರ್ಸ್‌ನ ಟಾಪರ್‌ಗಳಿಗೆ ಚಿನ್ನದ ಪದಕ ನೀಡಲಾಗುವುದು. ಜತೆಗೆ ಪ್ರತಿ ವಿಷಯದಲ್ಲೂ ರ್ಯಾಂಕ್ ನೀಡಲಾಗುವುದು. ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಥೀಸಿಸ್ ಪ್ರಶಸ್ತಿಯನ್ನು ನೀಡಲಾಗುವುದು. ಈಗಾಗಲೇ ಫಾರ್ಮಸಿ ಹಾಗೂ ನರ್ಸಿಂಗ್ ವಿಭಾಗದಲ್ಲಿ ಪಿಎಚ್‌ಡಿ ಸೆಂಟರ್‌ಗಳನ್ನು ತೆರೆಯಲಾಗಿದ್ದು, ವೈದ್ಯಕೀಯ ವಿಭಾಗದಲ್ಲೂ ಸೆಂಟರ್ ಆರಂಭವಾಗಲಿದೆ ಎಂದು ಅವರು ಹೇಳಿದರು.

ಕನ್ನಡೇತರರಿಗೆ 40 ಗಂಟೆಗಳ ಕನ್ನಡ ಕಲಿಸುವ ತರಬೇತಿಯೂ ನಡೆಯಲಿದೆ. ಆರೋಗ್ಯ ವಿಜ್ಞಾನ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದಲ್ಲಿ ಜೀವ ಕರ್ಷ ಎಂಬ ತುರ್ತು ಸಂದರ್ಭಗಳಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ಒದಗಿಸಲಾಗುತ್ತದೆ. ಆ ತರಬೇತಿಯನ್ನು ಪಡೆದಲ್ಲಿ ಮಾತ್ರವೇ ಇಂಟರ್ನ್‌ಶಿಪ್ ಪ್ರಮಾಣಪತ್ರವನ್ನು ಒದಗಿಸುವ ವ್ಯವಸ್ಥೆಯನ್ನು ವಿವಿ ಜಾರಿಗೆ ತಂದಿದೆ. ವಿದ್ಯಾರ್ಥಿ ವೈದ್ಯರು ನೇರವಾಗಿ ರೋಗಿಗಳೊಂದಿಗೆ ತಮ್ಮ ಕಲಿಕಾಭ್ಯಾಸವನ್ನು ಮಾಡುವುದನ್ನು ತಪ್ಪಿಸಲು ಬೊಂಬೆಗಳ ಜತೆ ಕಲಿಕೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಹಾಗೂ ಯೆನೆಪೋಯ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಆರಂಭಿಸಲಾಗಿದೆ. ವಿವಿ ಅಧೀನದ ಒಟ್ಟು 10 ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ ಎಂದು ಡಾ. ಸಚ್ಚಿದಾನಂದ ವಿವರಿಸಿದರು.

2020 ಜೂನ್ 1ರಿಂದ ಬೆಳ್ಳಿ ಹಬ್ಬ ಸಂಭ್ರಮ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ 2020ರ ಜೂನ್ 1ರಿಂದ 2021ರ ಜೂನ್ 1ರವರೆಗೆ ಬೆಳ್ಳಿ ಹಬ್ಬ ಸಂಭ್ರಮಾಚರಣೆಗೆ ಮುಂದಾಗಿದೆ. ಇದಕ್ಕಾಗಿ ಬೆಂಗಳೂರಿನ ಕೆಂಗೇರಿಯ ಭೀಮನ ಕೊಪ್ಪೆ ಗ್ರಾಮದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸೌಲಭ್ಯ ಆರಂಭಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ವಿವಿಯ ಆಡಳಿತಾತ್ಮಕ ಕಚೇರಿ ರಾಮನಗರಕ್ಕೆ ಸ್ಥಳಾಂತರಗೊಲ್ಳಲಿದೆ. ಸರಕಾರವು 71 ಎಕರೆ ಜಾಗವನ್ನು ರಾಮನಗರದ ಅರ್ಚಕರ ಹಳ್ಳಿಯಲ್ಲಿ ಇದಕ್ಕಾಗಿ ಒದಗಿಸಿದ್ದು, ನೂತನ ಆಡಳಿತಾತ್ಮಕ ಕಚೇರಿಗೆ ಸಿಂಡಿಕೇಟ್ ಅನುಮೋದನೆ ನೀಡಿದೆ ಎಂದು ಕುಲಪತಿ ಡಾ. ಸಚ್ಚಿದಾನಂದ ತಿಳಿಸಿದರು.

ರಾಜೀವ್ ಗಾಂಧಿ ವಿವಿಯ ರಿಜಿಸ್ಟ್ರಾರ್ ಶಿವಾನಂದ ಕಪಶಿ, ಮೌಲ್ಯಮಾಪನ ರಿಜಿಸ್ಟ್ರಾರ್ ಡಾ.ಕೆ.ಬಿ. ಲಿಂಗೇಗೌಡ, ಸಿಂಡಿಕೇಟ್ ಸದಸ್ಯರಾದ ಪ್ರೊ. ಯು.ಟಿ. ಇಫ್ತಿಕಾರ್ ಅಲಿ, ಡಾ. ಶಿವ ಶರಣ್ ಶೆಟ್ಟಿ, ಡಾ. ಜಿ.ಆರ್. ಚಂದ್ರಶೇಖರ್, ಡಾ. ಭಗವಾನ್ ಬಿ.ಸಿ., ಡಾ. ಕಿರಣ್ ಕುಮಾರ್, ಡಾ. ಉಮೇಶ್ ಬಾಬು, ಡಾ. ರವಿಶಂಕರ್ ಶೆಟ್ಟಿ, ಡಾ. ರವೀಂದ್ರ ಎಚ್.ಎನ್., ಡಾ. ಕಿರಣ್ ಕೈಲಾಶ್, ಡಾ. ವಿಜಯ ಕುಮಾರ್, ಡಾ.ಎಚ್.ಜೆ. ಜೈಕೃಷ್ಣ, ಡಾ. ದೀಪ್ತಿ ಬಾವಾ, ಡಾ. ಸುಧೀರ್ ಡಬ್ಲ್ಯು.ಆರ್., ಡಾ. ವಿ.ಟಿ. ವೆಂಕಟೇಶ್, ಡಾ. ಚಂದ್ರಶೇಖರ್ ಎಚ್.ಎಸ್., ಡಾ. ಎಚ್. ವೀರಭದ್ರಪ್ಪ, ಡಾ. ಅನ್ನಾದನಿ ಎಂ.ಮೇರಿ ಮೊದಲಾದರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಉದ್ಯೋಗ ಸೆಲ್ ಆರಂಭ
ರಾಜೀವ್ ಗಾಂಧಿ ವಿವಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ವಿಭಾಗ (ಪ್ಲೇಸ್‌ಮೆಂಟ್ ಸೆಲ್)ವನ್ನು ಆರಂಭಿಸಲಾಗಿದೆ. ನರ್ಸಿಂಗ್‌ನಲ್ಲಿ 300ಕ್ಕೂ ಅಧಿಕ ಕಾಲೇಜುಗಳು ವಿವಿ ಅಧೀನಕ್ಕೊಳಪಟ್ಟಿದ್ದು, ಪ್ರತಿ ವರ್ಷ 20 ಸಾವಿರದಷ್ಟು ವಿದ್ಯಾರ್ಥಿಗಳು ಸೇರ್ಪಡೆಯಾಗಿ 12 ಸಾವಿರದಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಮಧ್ಯವರ್ತಿಗಳ ಹಾವಳಿಯಿಂದ ವಿದ್ಯಾರ್ಥಿಗಳು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ವಿವಿಯಿಂದ ಈ ಸೆಲ್ ಆರಂಭಿಸಲಾಗಿದೆ. ಅರ್ನ್, ಲರ್ನ್ ಆ್ಯಂಡ್ ರಿಟರ್ನ್ (ಗಳಿಸು, ಕಲಿ ಮತ್ತು ವಾಪಾಸಾಗು) ಎಂಬ ಯೋಜನೆಯೊಂದಿಗೆ ಇಂಗ್ಲೆಂಡ್‌ನ ಆರೋಗ್ಯಶಿಕ್ಷಣ ಸಂಸ್ಥೆ ಜತೆ ಎಂಒಯು ಮಾಡಿಕೊಳ್ಳಲು ಸಿದ್ಧತೆ ನಡೆದಿದೆ ಎಂದು ಕುಲಪತಿ ಡಾ. ಸಚ್ಚಿದಾನಂದ ತಿಳಿಸಿದರು.

ವೈದ್ಯಕೀಯ ವಿದ್ಯಾರ್ಥಿಗಳಿಗೆ ವರ್ತನೆ- ಸಂವಹನ ಪಠ್ಯ!
ವೈದ್ಯರಲ್ಲಿ ಮಾನವೀಯತೆ ಕಡಿಮೆಯಾಗುತ್ತಿರುವ ನಿಟ್ಟಿನಲ್ಲಿ ವಿದ್ಯಾರ್ಥಿ ಮಟ್ಟದಲ್ಲಿಯೇ ಈ ಬಗ್ಗೆ ತರಬೇತಿ ನೀಡಲು ವಿವಿಯಿಂದ ಕಾರ್ಯಕ್ರಮಗಳಿವೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯು ಪ್ರಥಮ ವರ್ಷದ ಎಂಬಿಬಿಎಸ್‌ನಲ್ಲಿ ಕ್ಲಿನಿಕಲ್ ನಾಲೆಜ್ ನೀಡಲಾಗುತ್ತಿತ್ತು. ಈ ವರ್ಷದಿಂದ ಇಂಡಿಯನ್ ಮೆಡಿಕಲ್ ಗ್ರಾಜ್ಯುವೇಟ್ಸ್ ಎಂಬ ಧ್ಯೇಯದಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಯೋ ಎಥಿಕ್ಸ್, ಆಸ್ಪತ್ರೆ ನಿರ್ವಹಣೆ, ಪರಿಸರ, ವರ್ತನೆ, ಸಂವಹನ ಮೊದಲಾದ ಕೌಶಲ್ಯ ವರ್ದನೆಯಂತಹ ವಿಷಯಗಳಲ್ಲಿ ಪಠ್ಯವನ್ನು ಈ ಶೈಕ್ಷಣಿಕ ಸಾಲಿನಿಂದ ಆರಂಭಿಸಲಾಗುತ್ತಿದೆ ಎಂದು ಕುಲತಿ ಡಾ. ಸಚ್ಚಿದಾನಂದ ಉತ್ತರಿಸಿದರು.

ಅಧೀನ ಕಾಲೇಜುಗಳಲ್ಲಿ ಕಡ್ಡಾಯ ಮಳೆ ನೀರು ಕೊಯ್ಲು!
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟ ಕಾಲೇಜುಗಳಲ್ಲಿ ಕಡ್ಡಾಯ ಮಳೆ ನೀರು ಕೊಯ್ಲು ಆರಂಭಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಕುಲಪತಿ ಡಾ. ಸಚ್ಚಿದಾನಂದ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News