‘ಜೈ ಶ್ರೀ ರಾಮ್’ ಎಂದು ಹೇಳಲು ನಿರಾಕರಿಸಿದ ಬಾಲಕನಿಗೆ ಥಳಿಸಿದ ದುಷ್ಕರ್ಮಿಗಳು

Update: 2019-06-29 14:54 GMT

ಲಕ್ನೋ, ಜೂ.28: ಟೋಪಿ ಧರಿಸಿದ ಮತ್ತು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲು ನಿರಾಕರಿಸಿದ 16 ವರ್ಷದ ಬಾಲಕನೋರ್ವನಿಗೆ ಅಪರಿಚಿತ ದುಷ್ಕರ್ಮಿಗಳು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರ್ರಾ ನಿವಾಸಿ ಮುಹಮ್ಮದ್ ತಾಜ್ ಕಿದ್ವಾಯಿ ನಗರದಲ್ಲಿ ಶುಕ್ರವಾರ ನಮಾಝ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಉತ್ತರಪ್ರದೇಶದ ಪೊಲೀಸರು ತಿಳಿಸಿದ್ದಾರೆ.

ಬೈಕ್‌ ನಲ್ಲಿ ಆಗಮಿಸಿದ ಮೂವರು ಅಪರಿಚಿತ ದುಷ್ಕರ್ಮಿಗಳು ಮುಹಮ್ಮದ್ ತಾಜ್‌ ನ ಮನೆಗಿಂತ 100 ಮೀಟರ್ ದೂರದಲ್ಲಿ ಆತನನ್ನು ತಡೆದು ನಿಲ್ಲಿಸಿದರು ಹಾಗೂ ಟೊಪ್ಪಿ ತೆಗೆಯುವಂತೆ ಹೇಳಿದರು ಎಂದು ಬರ್ರಾ ಠಾಣಾಧಿಕಾರಿ ಸತೀಶ್ ಕುಮಾರ್ ಸಿಂಗ್ ಹೇಳಿದ್ದಾರೆ.

ದುಷ್ಕರ್ಮಿಗಳು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವಂತೆ ಬಾಲಕನನ್ನು ಬಲವಂತಪಡಿಸಿದರು ಆತ ನಿರಾಕರಿಸಿದಾಗ ಥಳಿಸಿದರು. ‘‘ಅವರು ನನ್ನ ಟೋಪಿ ತೆಗೆದರು. ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಬಲವಂತಪಡಿಸಿದರು. ನಿರಾಕರಿಸಿದಾಗ ಥಳಿಸಿದರು’’ ಎಂದು ತಾಜ್ ಹೇಳಿದ್ದಾನೆ.

ಈ ಪ್ರದೇಶದಲ್ಲಿ ಟೋಪಿ ಧರಿಸುವುದಕ್ಕೆ ಅವಕಾಶ ಇಲ್ಲ ಎಂದು ಅಪರಿಚಿತರು ಹೇಳಿರುವುದಾಗಿ ಬಾಲಕ ತಿಳಿಸಿದ್ದಾನೆ. ತಾನು ನೆರವಿಗಾಗಿ ಕೂಗಿಕೊಂಡೆ ಹಾಗೂ ರಕ್ಷಿಸುವಂತೆ ಇಬ್ಬರು ಅಂಗಡಿಯವರಲ್ಲಿ ಬೇಡಿಕೊಂಡೆ. ದಾರಿಹೋಕರು ನನಗೆ ನೆರವು ನೀಡಿದರು. ಇದರಿಂದಾಗಿ ದಾಳಿಕೋರರು ಪರಾರಿಯಾದರು ಎಂದು ತಾಜ್ ತಿಳಿಸಿದ್ದಾನೆ.

ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಹಾಗೂ ಆರೋಪಿಗಳ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸತೀಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News