×
Ad

ಸಿಂಧೂರ: ತನ್ನ ವಿರುದ್ಧದ ಟೀಕೆಗೆ ಸಂಸದೆ ನುಸ್ರತ್ ಜಹಾನ್ ಪ್ರತಿಕ್ರಿಯೆ ಏನು ಗೊತ್ತೇ?

Update: 2019-06-30 09:30 IST

ಕೊಲ್ಕತ್ತಾ, ಜೂ.30: ಸಿಂಧೂರ ಮತ್ತು ಬಳೆ ಧರಿಸಿ ಸಂಸತ್ ಅಧಿವೇಶನದಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ತೀವ್ರ ಟೀಕೆಗಳನ್ನು ಎದುರಿಸಿದ ಬೆಂಗಾಲಿ ನಟಿ ನುಸ್ರತ್ ಜಹಾನ್ "ಎಲ್ಲರನ್ನೂ ಒಳಗೊಂಡ ಭಾರತ"ದ ಪ್ರತಿನಿಧಿ ಎಂದು ಪ್ರತಿಕ್ರಿಯಿಸಿದ್ದಾರೆ.

"ಜಾತಿ, ವರ್ಣ, ಧರ್ಮದ ತಡೆಗಳನ್ನು ಮೀರಿ ಎಲ್ಲರನ್ನೂ ಒಳಗೊಂಡ ಭಾರತವನ್ನು ಪ್ರತಿನಿಧಿಸುತ್ತೇನೆ" ಎಂಬ ಹೇಳಿಕೆಯನ್ನು ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದ ನುಸ್ರತ್ ಟ್ವಿಟ್ಟರ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.

ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ; ಆದರೆ ಮುಸ್ಲಿಂ ಆಗಿಯೇ ಉಳಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

"ನಾನು ಮುಸ್ಲಿಂ ಆಗಿಯೇ ಉಳಿದಿದ್ದೇನೆ. ನನ್ನ ಉಡುಪಿನ ಬಗ್ಗೆ ಯಾರೂ ಟೀಕಿಸಬಾರದು. ನಂಬಿಕೆ ಎನ್ನುವುದು ಉಡುಗೆಯನ್ನು ಮೀರಿದ್ದು ಹಾಗೂ ಇದು ಎಲ್ಲ ಧರ್ಮಗಳ ಅಮೂಲ್ಯ ಸಿದ್ಧಾಂತಗಳ ಬಗೆಗಿನ ನಂಬಿಕೆ ಮತ್ತು ಆಚರಣೆಗೆ ಸಂಬಂಧಿಸಿದ್ದು" ಎಂದು ಅಭಿಪ್ರಾಯಪಟ್ಟಿದ್ದಾರೆ.

ಜೂನ್ 25ರಂದು ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸಿದಾಗಿನ ಅವರ ಉಡುಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ಧರ್ಮಗುರುಗಳು ಅವರ ವಿರುದ್ಧ ಫತ್ವಾ ಹೊರಡಿಸಿದ್ದರು. ಜೂನ್ 19ರಂದು ಟರ್ಕಿಯಲ್ಲಿ ನುಸ್ರತ್(29) ನಿಖಿಲ್ ಜೈನ್ ಎಂಬ ಉದ್ಯಮಿಯನ್ನು ವಿವಾಹವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News