ಮನ್ ಕೀ ಬಾತ್‌ನಲ್ಲಿ ನೀರಿನ ಸಂರಕ್ಷಣೆಗೆ ಕರೆ ನೀಡಿದ ಪ್ರಧಾನಿ ಮೋದಿ

Update: 2019-06-30 07:06 GMT

ಹೊಸದಿಲ್ಲಿ, ಜೂ.30: ನರೇಂದ್ರ ಮೋದಿ ಸತತ ಎರಡನೇ ಬಾರಿ ಪ್ರಧಾನಮಂತ್ರಿಯಾದ ಬಳಿಕ ತನ್ನ ಜನಪ್ರಿಯ ಕಾರ್ಯಕ್ರಮ ‘ಮನ್‌ಕೀ ಬಾತ್’ಗೆ ರವಿವಾರ ಚಾಲನೆ ನೀಡಿದರು. ಈ ಮೂಲಕ ತನ್ನ ಮೊದಲ ಮಾತು ಆಡಿದರು.

ತಮ್ಮ ಮನದ ಮಾತಿನಲ್ಲಿ ನೀರಿನ ಮಹತ್ವದ ಬಗ್ಗೆ ಹೆಚ್ಚು ಒತ್ತು ನೀಡಿದ ಪ್ರಧಾನಿ,‘‘ಪ್ರತಿ ವರ್ಷವೂ ದೇಶದ ಎಲ್ಲ ಕಡೆ ನೀರಿನ ಅಭಾವ ತಲೆದೋರುತ್ತದೆ. ನಮ್ಮ ದೇಶದಲ್ಲಿ ಶೇ.8ರಷ್ಟು ಮಳೆ ನೀರನ್ನು ಮಾತ್ರ ಮಳೆಕೊಯ್ಲು ಮಾಡಲಾಗುತ್ತಿದೆ.

ಗಣ್ಯರು ಸೇರಿದಂತೆ ದೇಶದ ಎಲ್ಲ ನಾಗರಿಕರು ನೀರು ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎನ್ನುವುದು ನನ್ನ ಮನವಿ. ನೀರು ಸಂರಕ್ಷಣೆಯ ಸಾಂಪ್ರದಾಯಿಕ ಪದ್ದತಿಯ ಜ್ಞಾನವನ್ನು ಎಲ್ಲರೂ ಹಂಚಿಕೊಳ್ಳಬೇಕು. ನೀರು ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ವ್ಯಕ್ತಿ ಅಥವಾ ಎನ್‌ಜಿಒಗಳೊಂದಿಗೆ ನಿಮ್ಮ ಜ್ಞಾವನ್ನು ಹಂಚಿಕೊಳ್ಳಿ. ಆರೋಗ್ಯವಂತ ವ್ಯಕ್ತಿ ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯ. ಯೋಗದಿಂದ ಇದು ಸಾಧ್ಯವಿದೆ. ಹೀಗಾಗಿ ಯೋಗಕ್ಕೆ ನೀಡುವ ಪ್ರಚಾರ ಸಮಾಜ ಸೇವೆಗಿಂತ ಕಡಿಮೆಯಲ್ಲ ಎಂದು ಮೋದಿ ಮನ್‌ಕೀ ಬಾತ್‌ನಲ್ಲಿ ಹೇಳಿದರು.

 ಕಳೆದ ಕೆಲವು ತಿಂಗಳುಗಳಿಂದ ಕೆಲವರು ನೀರಿಗೆ ಸಂಬಂಧಿಸಿ ಪತ್ರಗಳನ್ನು ನನಗೆ ಬರೆದಿದ್ದಾರೆ. ನೀರಿನ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿರುವುದಕ್ಕೆ ಖುಷಿಯಾಗುತ್ತಿದೆ. ನೀರಿನ ಸಂರಕ್ಷಣೆಯ ಪ್ರಾಮುಖ್ಯದ ಬಗ್ಗೆ ಗ್ರಾಮ ಪ್ರಧಾನರಿಗೆ ನಾನು ಪತ್ರ ಬರೆಯುತ್ತೇನೆ. ಗ್ರಾಮೀಣ ಭಾರತದಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಯಾವ ಕ್ರಮಕೈಗೊಳ್ಳಬಹುದೆಂದು ಅವರಿಗೆ ತಿಳಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News