​ಮಗುವಿಗೆ ಇಟ್ಟ 'ನರೇಂದ್ರ ಮೋದಿ' ಹೆಸರು ಬದಲಿಸಲು ತಾಯಿ ಮುಂದಾದದ್ದೇಕೆ?

Update: 2019-06-30 07:33 GMT
ಚಿತ್ರ ಕೃಪೆ: ANI

ಲಕ್ನೋ, ಜೂ.30: ಉತ್ತರ ಪ್ರದೇಶದ ಮಹಿಳೆ ತನ್ನ ಮಗುವಿಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಟ್ಟದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಇದಾದ ಒಂದು ತಿಂಗಳಲ್ಲೇ ಮಗುವಿಗೆ 'ಅಫ್ತಾಬ್ ಆಲಮ್ ಮುಹಮ್ಮದ್ ಮೋದಿ' ಎಂದು ಮರು ನಾಮಕರಣ ಮಾಡಲು ತಾಯಿ ನಿರ್ಧರಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ಮೋದಿ ಅಲೆಯಿಂದಾಗಿ ಬಿಜೆಪಿ ಸತತ ಎರಡನೇ ಬಾರಿಗೆ ಮೇ 23ರಂದು ಅಧಿಕಾರ ಸೂತ್ರ ಹಿಡಿಯುತ್ತಿದ್ದಂತೆ, "ಫಲಿತಾಂಶದ ದಿನ ಹುಟ್ಟಿದ ಮಗುವಿಗೆ ಮುಸ್ಲಿಂ ಮಹಿಳೆ ನರೇಂದ್ರ ದಾಮೋದರ ಮೋದಿ" ಎಂದು ಹೆಸರಿಟ್ಟಿದ್ದಾರೆ ಎಂಬ ಸುದ್ದಿ ಉತ್ತರ ಪ್ರದೇಶದ ಗೊಂಡಾ ಗ್ರಾಮದಿಂದ ಬಂದಿತ್ತು.

ಇದಾದ ಒಂದು ತಿಂಗಳಲ್ಲೇ ಪರ್ಸಾಪುರ ಮಹ್ರೂರ್ ಗ್ರಾಮದ ಮೆಹನಾಝ್ ಬೇಗಂ(25), ಮಗುವಿಗೆ ಆ ಹೆಸರು ಇಟ್ಟದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಮಗುವಿಗೆ ಮೋದಿ ಹೆಸರಿಡುವಂತೆ ಮನವೊಲಿಸಿದ್ದು ತನ್ನ ಪತ್ರಕರ್ತ ಸಂಬಂಧಿ ಎಂದು ದೂರಿದ್ದಾರೆ. ಆತನಿಂದಾಗಿ ಈ ವಂಚನೆ ಮಾಡಿದ್ದಾಗಿ ಮೆಹನಾಝ್ ಹೇಳಿಕೊಂಡಿದ್ದಾರೆ. ವಾಸ್ತವವಾಗಿ ಈ ಮಗು ಹುಟ್ಟಿದ್ದು, ಮೇ 23ರಂದು ಅಲ್ಲ; ಬದಲಾಗಿ ಮೇ 12ರಂದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಸಹಾಯಕ ಅಭಿವೃದ್ಧಿ ಅಧಿಕಾರಿ ಘನಶ್ಯಾಂ ಪಾಂಡೆಯವರ ಮೂಲಕ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

"ಇದು ಇಷ್ಟು ದೊಡ್ಡ ವಿವಾದವಾಗುತ್ತದೆ ಎಂಬ ಕಲ್ಪನೆಯೇ ನನಗಿರಲಿಲ್ಲ. ನನ್ನ ಅತ್ತೆಯ ಮಗ ಹೇಳಿದಂತೆ ನಾನು ಮಾಡಿದೆ" ಎಂದು ಮೆಹನಾಝ್ ಹೇಳುತ್ತಾರೆ.

'ಹಿಂದೂಸ್ತಾನ್' ಎಂಬ ಹಿಂದಿ ದೈನಿಕಕ್ಕೆ ವರದಿಗಾರನಾಗಿರುವ ಮುಶ್ತಾಕ್ ಅಹ್ಮದ್, ಮೋದಿ ಹೆಸರಿಡುವಂತೆ ಮನವೊಲಿಸಿದ್ದು ಮಾತ್ರವಲ್ಲದೇ, ಮಗು ಮೇ 23ರಂದು ಹುಟ್ಟಿದ್ದು ಎಂಬ ಸುದ್ದಿ ಹಬ್ಬಿಸಿದ ಎನ್ನಲಾಗಿದೆ. ಮೇ 25ರಂದು ಹಿಂದೂಸ್ತಾನ್ ಪತ್ರಿಕೆಯ ಲಕ್ನೋ ಆವೃತ್ತಿ 12ನೇ ಪುಟದಲ್ಲಿ ಈ ಸುದ್ದಿ ಅಹ್ಮದ್ ಹಾಗೂ ಬ್ಯೂರೊ ಮುಖ್ಯಸ್ಥ ಖಮರ್ ಅಬ್ಬಾಸ್ ಹೆಸರಲ್ಲಿ ಪ್ರಕಟವಾಗಿತ್ತು.

"ಮುಶ್ತಾಕ್ ನಾನು ಮಾಧ್ಯಮದ ಮುಂದೆ ಏನು ಹೇಳಬೇಕೆಂದು ಕಂಠಪಾಠ ಮಾಡಿಸಿದ. ನಾನು ಅನಕ್ಷರಸ್ಥೆ; ಮೋದಿ ಬಗ್ಗೆ ನನಗೇನೂ ಗೊತ್ತಿಲ್ಲ" ಎಂದು ಮೆಹನರ್ ಹೇಳುತ್ತಾರೆ. ಆದರೆ ಈ ಆರೋಪವನ್ನು ಮುಶ್ತಾಕ್ ಅಲ್ಲಗಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News