ಜನತೆಗೆ ತುರ್ತು ಸ್ಥಿತಿಯನ್ನು ನೆನಪಿಸಿದ ಪ್ರಧಾನಿ ಮೋದಿ

Update: 2019-06-30 14:35 GMT

ಹೊಸದಿಲ್ಲಿ,ಜೂ.30: ರವಿವಾರ ತನ್ನ ರೇಡಿಯೊ ಭಾಷಣದಲ್ಲಿ ತುರ್ತು ಸ್ಥಿತಿಯನ್ನು ಜನರಿಗೆ ನೆನಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು,ಪ್ರಜಾಪ್ರಭುತ್ವವನ್ನು ಲಘುವಾಗಿ ಪರಿಗಣಿಸದಂತೆ ಆಗ್ರಹಿಸಿದರು. ದೈನಂದಿನ ಜೀವನದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳು ಕಿತ್ತುಕೊಳ್ಳಲ್ಪಟ್ಟಾಗಲೇ ಅವುಗಳ ಮಹತ್ವದ ಅರಿವಾಗುತ್ತದೆ ಎಂದು ಅವರು ಹೇಳಿದರು.

ಅಧಿಕಾರಕ್ಕೆ ಮರಳಿದ ಬಳಿಕ ತನ್ನ ಮೊದಲ ‘ಮನ್ ಕಿ ಬಾತ್’ ಮಾಸಿಕ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ,ಯಾವುದೇ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ಆಹಾರ ದೊರೆಯುತ್ತಿದ್ದರೆ ಆತನಿಗೆ ಹಸಿವಿನ ಸಂಕಟ ಗೊತ್ತಾಗುವುದಿಲ್ಲ. ಅದೇ ರೀತಿ ದೈನಂದಿನ ಬದುಕಿನಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳು ಕಿತ್ತುಕೊಳ್ಳಲ್ಪಡುವವರೆಗೂ ಅವುಗಳ ಮಹತ್ವ ಗೊತ್ತಾಗುವುದಿಲ್ಲ ಎಂದರು.

44 ವರ್ಷಗಳ ಹಿಂದೆ ಜೂ.25ರಂದು ದೇಶದಲ್ಲಿ ತುರ್ತು ಸ್ಥಿತಿಯನ್ನು ಹೇರಲಾಗಿತ್ತು. 1977ರ ಲೋಕಸಭಾ ಚುನಾವಣೆಗಳಲ್ಲಿ ಜನರು ತಮ್ಮ ಇತರ ಹಕ್ಕುಗಳು ಮತ್ತು ಅಗತ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮತ ಚಲಾಯಿಸಿದ್ದರು. ಅವರು ಪ್ರಜಾಪ್ರಭುತ್ವದ ಉಳಿವಿಗಾಗಷ್ಟೇ ಮತ ಚಲಾಯಿಸಿದ್ದರು.ಇಂತಹುದೊಂದು ಚುನಾವಣೆಗೆ ಈ ದೇಶವು ಸಾಕ್ಷಿಯಾಗಿತ್ತು ಎಂದು ಮೋದಿ ನುಡಿದರು.

ಏನಾದರೊಂದು ನಮ್ಮ ತೀರ ನಿಕಟವಾಗಿದ್ದಾಗ ಅದರ ಮಹತ್ವವನ್ನು ನಾವು ಕಡೆಗಣಿಸುತ್ತೇವೆ. ಅದರ ಕುರಿತು ಅದ್ಭುತ ವಿಷಯಗಳನ್ನೂ ನಾವು ಕಡೆಗಣಿಸುತ್ತೇವೆ. ಅಮೂಲ್ಯವಾದ ಪ್ರಜಾಪ್ರಭುತ್ವ ನಮಗೆ ಲಭಿಸಿದೆ.ಆದರೂ ನಾವು ಅದನ್ನು ಲಘುವಾಗಿ ಕಡೆಗಣಿಸುತ್ತಿದ್ದೇವೆ ಎಂದರು.

ಇತ್ತೀಚಿನ ಲೋಕಸಭಾ ಚುನಾವಣೆಯನ್ನು ಪ್ರಸ್ತಾಪಿಸಿದ ಮೋದಿ,ಸುಮಾರು 91 ಕೋಟಿ ಮತದಾರರ ಪೈಕಿ 61 ಕೋ.ದಾಖಲೆ ಪ್ರಮಾಣದಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರು. ಚೀನಾವನ್ನು ಹೊರತುಪಡಿಸಿದರೆ ಭಾರತದಲ್ಲಿ ಮತಗಳನ್ನು ಚಲಾಯಿಸಿದವರ ಸಂಖ್ಯೆ ವಿಶ್ವದ ಇತರ ಯಾವುದೇ ದೇಶದ ಜನಸಂಖ್ಯೆಯನ್ನು ಮೀರಿಸಿದೆ ಎಂದರು.

 ಲಕ್ಷಾಂತರ ಶಿಕ್ಷಕರು,ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚುನಾವಣೆಯನ್ನು ಯಶಸ್ವಿಯಾಗಿಸಲು ಹಗಲೂರಾತ್ರಿ ಶ್ರಮಿಸಿದ್ದರು. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಮೂರು ಲಕ್ಷ ಮತ್ತು ರಾಜ್ಯ ಪೊಲೀಸ್ ಇಲಾಖೆಗಳ 20 ಲಕ್ಷ ಸಿಬ್ಬಂದಿಗಳು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವಂತೆ ನೋಡಿಕೊಂಡಿದ್ದರು ಎಂದು ಬೆಟ್ಟು ಮಾಡಿದ ಅವರು,ಬಹುಶಃ ಇದೇ ಮೊದಲ ಬಾರಿಗೆ ಮಹಿಳೆಯರು ಪುರುಷರಷ್ಟೇ ಹುರುಪಿನಿಂದ ಮತಗಳನ್ನು ಚಲಾಯಿಸಿದ್ದು ನಮ್ಮನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಈ ಬಾರಿ ಮತ ಚಲಾಯಿಸಿದ ಪುರುಷರು ಮತ್ತು ಮಹಿಳೆಯರ ಪ್ರಮಾಣ ಹೆಚ್ಚುಕಡಿಮೆ ಒಂದೇ ಆಗಿತ್ತು. ಅಲ್ಲದೆ ಸಂಸತ್ತಿನಲ್ಲಿ 78ರಷ್ಟು ದಾಖಲೆ ಸಂಖ್ಯೆಯಲ್ಲಿ ಮಹಿಳಾ ಸದಸ್ಯರಿರುವುದು ಇನ್ನೊಂದು ಉತ್ತೇಜಕ ಅಂಶವಾಗಿದೆ ಎಂದರು.

 ಗೂಗಲ್ ಮತ್ತು ಡಿಜಿಟಲ್ ಜಗತ್ತಿನ ಇಂದಿನ ದಿನಗಳಲ್ಲಿ ಸಮಯಾವಕಾಶವನ್ನು ಮಾಡಿಕೊಂಡು ಹೆಚ್ಚೆಚ್ಚು ಪುಸ್ತಕಗಳನ್ನು ಓದುವಂತೆಯೂ ಪ್ರಧಾನಿ ಜನತೆಯನ್ನು ಕೋರಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News