ಉಪ ಸ್ಪೀಕರ್ ಹುದ್ದೆಗೆ ಶಿವಸೇನೆ ನಾಯಕ ಆಯ್ಕೆ ?

Update: 2019-06-30 15:35 GMT

ಹೊಸದಿಲ್ಲಿ, ಜೂ. 30: ಲೋಕಸಭೆಯ ಉಪ ಸ್ಪೀಕರ್ ಹುದ್ದೆಗೆ ಎನ್‌ಡಿಎ ಮಿತ್ರ ಪಕ್ಷವಾಗಿರುವ ಶಿವಸೇನೆಯ ನಾಯಕ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

17ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನ ಜುಲೈ 16ರ ವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಲೋಕಸಭೆಗೆ ನೂತನ ಉಪ ಸ್ಪೀಕರ್ ನಿಯೋಜನೆ ಆಗಲಿದೆ. ಆದರೆ, ಈ ಹುದ್ದೆಯ ಅಭ್ಯರ್ಥಿಯ ಬಗ್ಗೆ ಊಹಾಪೋಹಗಳಿವೆ. ಆರಂಭದಲ್ಲಿ ಉಪ ಸ್ಪೀಕರ್ ಹುದ್ದೆಗೆ ತಮ್ಮ ಪಕ್ಷದ ನಾಯಕರು ಆಯ್ಕೆಯಾಗಬೇಕು ಎಂದು ಶಿವಸೇನೆಯ ನಾಯಕ ಸಂಜಯ್ ರಾವತ್ ಹೇಳಿದ್ದರು. ಆದರೆ, ಅನಂತರ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಹಾಗೂ ಬಿಜು ಜನತಾ ದಳದ ಅಭ್ಯರ್ಥಿಗಳು ಉಪ ಸ್ಪೀಕರ್ ಹುದ್ದೆಯ ಸ್ಪರ್ಧೆಯಲ್ಲಿ ಇರುವ ಬಗ್ಗೆ ವರದಿಯಾಗಿತ್ತು.

ಈ ಎಲ್ಲ ವದಂತಿಗಳ ನಡುವೆ, ವೈಎಸ್‌ಆರ್‌ಸಿಪಿ ಹಾಗೂ ಬಿಜೆಡಿ ನಾಯಕರು ತಾವು ಉಪ ಸ್ಪೀಕರ್ ಹುದ್ದೆಯ ಸ್ಪರ್ಧೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದವು.

ಉಪ ಸ್ಪೀಕರ್ ಹುದ್ದೆಗೆ ತಮ್ಮ ಪಕ್ಷದ ನಾಯಕರನ್ನು ಆಯ್ಕೆ ಮಾಡುವಂತೆ ಶಿವಸೇನೆ ಎನ್‌ಡಿಎ ಸರಕಾರದ ಮೇಲೆ ಒತ್ತಡ ಹೇರುತ್ತಿದೆ ಒಂದು ಮೂಲಗಳು ತಿಳಿಸಿವೆ. ಈ ಸಂಬಂಧ ಶಿವಸೇನೆಯೊಂದಿಗೆ ಎರಡು ಸುತ್ತಿನ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೆಳಮನೆಯಲ್ಲಿ ಶಿವಸೇನೆ ಒಟ್ಟು 18 ಸಂಸದರ ಪ್ರಾಬಲ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News