ಸೇನೆಯಿಂದ ‘ಆಯ್ಕೆಯಾದ’ಪ್ರಧಾನಿ: ಪ್ರತಿಪಕ್ಷಗಳ ಟೀಕೆಗೆ ಇಮ್ರಾನ್ ಆಕ್ರೋಶ

Update: 2019-06-30 16:30 GMT

ಇಸ್ಲಾಮಾಬಾದ್,ಜೂ.30: ತಾನು ಸೇನೆಯಿಂದ ‘ ಆಯ್ಕೆಯಾದ’ ಪ್ರಧಾನಿಯೆಂಬ ಪ್ರತಿಪಕ್ಷಗಳ ಟೀಕೆಗೆ ರವಿವಾ ತೀಕ್ಷ್ಣವಾದ ಪ್ರತಿಕ್ರಿಯೆ ಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ನನ್ನನ್ನು ‘ಆಯ್ಕೆ’ ಮಾಡಲ್ಪಟ್ಟ ಪ್ರಧಾನಿಯೆಂದು ಆಪಾದಿಸುತ್ತಿರುವವರೇ ಸ್ವತಃ ಪಾಕ್‌ನ ಮಿಲಿಟರಿ ಸರ್ವಾಧಿಕಾರದ ‘ನರ್ಸರಿ’ಯಲ್ಲಿ ತಯಾರಾದವರೆಂದು ಹೇಳಿದ್ದಾರೆ.

ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಬಜೆಟ್ ಅಧಿವೇಶನದ ಅಂತಿಮ ಬೈಠಕ್ ಅನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಹಾಲಿ ಪಾಕ್ ಪ್ರತಿಪಕ್ಷ ಸದಸ್ಯರ ವಿರುದ್ಧ ಹೊರಿಸಲಾದ ಭ್ರಷ್ಟಾಚಾರ ಆರೋಪಗಳನ್ನು ಕೈಬಿಡುವಂತೆ ಆಗಿನ ಅಮೆರಿಕ ಆಡಳಿತವು ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಝ್ ಮುಶರ್ರಫ್ ಅವರನ್ನು ಕೋರಿತ್ತೆಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕೊಂಡೊಲಿಝಾ ರೈಸ್ ತನ್ನ ಆತ್ಮಕತೆಯಲ್ಲಿ ಬರೆದಿರುವುದನ್ನು ಉಲ್ಲೇಖಿಸಿದರು.

‘‘ಇಂತಹ ವ್ಯಕ್ತಿಗಳು ಅಧಿಕಾರದಲ್ಲಿ ಇರುವುದನ್ನು ಅಮೆರಿಕ ಬಯಸಿತ್ತು. ಯಾಕೆಂದರೆ ಅವರು ಅಮೆರಿಕದ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಭರವಸೆ ನೀಡಿದ್ದರು’’ ಎಂದವರು ತಿಳಿಸಿದರು.

   ಇಮ್ರಾನ್ ಖಾನ್ ಅವರ ಭಾಷಣದ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಮಾತ್ರವೇ ಉಪಸ್ಥಿತರಿದ್ದರು. ಸದನದ ಕಲಾಪಕ್ಕೆ ಅಗತ್ಯವಿರುವಷ್ಟು ಸದಸ್ಯರು ಸದನದಲ್ಲಿ ಅನುಪಸ್ಥಿತರಿದ್ದ ಹೊರತಾಗಿಯೂ ಸದನವು ಸುವ್ಯವಸ್ಥಿತವಾಗಿದೆಯೆಂದು ಸ್ಪೀಕರ್ ನೀಡಿದ ತೀರ್ಪನ್ನು ವಿರೋಧಿಸಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದ್ದರು.

    ಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಪಾಕ್ ರಾಷ್ಟ್ರೀಯ ಅಸೆಂಬ್ಲಿ ಹಾಗೂ ಸೆನೆಟ್ ಸದಸ್ಯರು ಅವರನ್ನು ಮಿಲಿಟರಿಯಿಂದ ಆಯ್ಕೆ ಮಾಡಲ್ಪಟ್ಟ ಪ್ರಧಾನಿಯೆಂದು ಟೀಕಿಸುತ್ತಿದ್ದಾರೆ. ಕಳೆದ ವರ್ಷ ಪಾಕ್ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಪಾಕ್ ಸೇನೆಯು ಚುನಾವಣಾ ಅಕ್ರಮಗಳನ್ನು ಎಸಗಿ ಇಮ್ರಾನ್ ಖಾನಂ ನೇತೃತ್ವದ ತೆಹ್ರೆಕೆ ಇನ್ಸಾಫ್ ಪಕ್ಷವು ಅಧಿಕಾರಕ್ಕೇರಲು ನೆರವಾಗಿತ್ತೆಂದು ಪಾಕ್‌ನ ಪ್ರತಿಪಕ್ಷಗಳು ಆಪಾದಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News