ಗುಜರಾತ್: ಪಟೇಲ್ ಪ್ರತಿಮೆಯ ವೀಕ್ಷಣಾ ಗ್ಯಾಲರಿಗೆ ನುಗ್ಗಿದ ಮಳೆನೀರು

Update: 2019-06-30 16:56 GMT

 ಗಾಂಧೀನಗರ, ಜೂ.30: ಭಾರೀ ಗಾಳಿಯೊಂದಿಗೆ ಸುರಿದ ಮಳೆನೀರು ಗುಜರಾತ್‌ನ ನರ್ಮದಾ ನದಿ ದಡದಲ್ಲಿರುವ ವಲ್ಲಭಬಾಯ್ ಪಟೇಲ್ ಪ್ರತಿಮೆಯ ವೀಕ್ಷಣಾ ಗ್ಯಾಲರಿಯ ಒಳನುಗ್ಗಿದ್ದು, ಪ್ರತಿಮೆಯ ವಿನ್ಯಾಸದಿಂದ ಹೀಗೆ ಆಗಿದೆ ಎಂದು ಅಧಿಕೃತ ಟ್ವಿಟರ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

 182 ಮೀಟರ್ ಎತ್ತರದ ವಿಶ್ವದ ಅತೀ ಎತ್ತರದ , ಏಕತಾ ಪ್ರತಿಮೆಯೆಂದು ಹೆಸರಾಗಿರುವ ಪಟೇಲ್ ಪ್ರತಿಮೆಯನ್ನು ಕಳೆದ ವರ್ಷ ಉದ್ಘಾಟಿಸಲಾಗಿದೆ. ಶನಿವಾರ ಬೀಸಿದ ಭಾರೀ ಗಾಳಿಯಿಂದ ಮಳೆನೀರು ಪ್ರತಿಮೆಯಲ್ಲಿರುವ ವೀಕ್ಷಣಾ ಗ್ಯಾಲರಿಯ ಒಳನುಗ್ಗಿದೆ. ವೀಕ್ಷಣಾ ಗ್ಯಾಲರಿಯಲ್ಲಿ ನಿಂತು ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ವಿಶ್ವದ ಅತೀ ಎತ್ತರದ ಪ್ರತಿಮೆಯನ್ನು ವೀಕ್ಷಿಸಲು ತುಂಬಾ ನಿರೀಕ್ಷೆ ಇಟ್ಟುಕೊಂಡು ನಾವು ಬಂದಿದ್ದೆವು. ಆದರೆ ಶನಿವಾರ ಮಳೆ ಪ್ರಮಾಣ ಕಡಿಮೆಯಿದ್ದರೂ ಪ್ರತಿಮೆಯ ವೀಕ್ಷಣಾ ಗ್ಯಾಲರಿಯಲ್ಲಿರುವ ಪ್ರಧಾನ ಸಭಾಂಗಣ ಮತ್ತು ಗ್ಯಾಲರಿ ನೀರಿನಿಂದ ತುಂಬಿತ್ತು. ಇದು ತುಂಬಾ ದುರದೃಷ್ಟಕರ ಎಂದು ಪ್ರವಾಸಿಗರು ಅಸಮಾಧಾನ ಸೂಚಿಸಿದ್ದಾರೆ.

 ವೀಕ್ಷಣಾ ಗ್ಯಾಲರಿಯನ್ನು ಪ್ರತಿಮೆಯ ಎದೆಯ ಭಾಗದಲ್ಲಿ ರಚಿಸಲಾಗಿದ್ದು ಇದಕ್ಕೆ ಕಬ್ಬಿಣದ ಗ್ರಿಲ್ ಇದೆ. ಗ್ಯಾಲರಿಯ ಹಿಂದಿನ ಭಾಗದಲ್ಲಿ ಗಾಜನ್ನು ಅಳವಡಿಸಲಾಗಿದೆ. ಗ್ಯಾಲರಿಯ ಎದುರಿನ ಭಾಗ ಓಪನ್ ಆಗಿರುವ ಕಾರಣ ಮಳೆ ನೀರು ಸಹಜವಾಗಿಯೇ ಒಳಬರುತ್ತದೆ ಎಂದು ನರ್ಮದಾ ಜಿಲ್ಲಾಧಿಕಾರಿ ಐಕೆ ಪಟೇಲ್ ಹೇಳಿದ್ದಾರೆ . ನೀರು ಹೊರಹೋಗುವ ವ್ಯವಸ್ಥೆಯೂ ಇದರಲ್ಲಿದೆ. ಆದರೆ ಗಾಳಿ ಅತ್ಯಂತ ವೇಗದಿಂದ ಬೀಸುವಾಗ ಒಳನುಗ್ಗುವ ಮಳೆನೀರಿನ ಪ್ರಮಾಣ ಅಧಿಕವಾಗಿರುತ್ತದೆ. ಸಿಬ್ಬಂದಿಗಳು ಮಳೆ ನೀರನ್ನು ಹೊರಗೆ ಹಾಕುವ ಕೆಲಸ ಮಾಡಿದ್ದಾರೆ. ಆದರೆ ಇದು ನೀರಿನ ಸೋರಿಕೆಯಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News