‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’: ಕೇಂದ್ರದ ಯೋಜನೆಗೆ ಡಿಎಂಕೆ ವಿರೋಧ

Update: 2019-06-30 18:26 GMT

ಚೆನ್ನೈ, ಜೂ. 30: ಕೇಂದ್ರದ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಪ್ರಸ್ತಾವವನ್ನು ರವಿವಾರ ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷ ಡಿಎಂಕೆ, ಇದು ಒಕ್ಕೂಟ ವಾದಕ್ಕೆ ವಿರುದ್ಧವಾದುದು ಎಂದಿದೆ.

‘ಒಂದು ರಾಷ್ಟ್ರ, ಒಂದು ಪಡಿತರ’ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 2020 ಜೂನ್ 30ರ ವರೆಗೆ ಗಡುವು ನೀಡಿದೆ.

ಈ ವ್ಯವಸ್ಥೆಯಲ್ಲಿ ಫಲಾನುಭವಿಗಳು ದೇಶದ ಯಾವುದೇ ಭಾಗದ ಪಡಿತರ ಅಂಗಡಿಯಿಂದ ಸಬ್ಸಿಡಿಸಹಿತದ ಆಹಾರ ಧಾನ್ಯಗಳನ್ನು ಖರೀದಿಸಲು ಸಾಧ್ಯ. ‘‘ಸಾರ್ವಜನಿಕ ವಿತರಣೆ ರಾಜ್ಯ ಸರಕಾರಗಳ ಮೂಲಭೂತ ಹಕ್ಕು. ಇಂತಹ ಹಕ್ಕನ್ನು ಉಲ್ಲಂಘಿಸಿದರೆ ಎದುರಿಸಬೇಕಾದ ಪರಿಣಾಮಗಳ ಬಗ್ಗೆ ಕೇಂದ್ರ ಆಹಾರ ಸಚಿವರು ಅರ್ಥ ಮಾಡಿಕೊಂಡಿಲ್ಲ’’ ಎಂದು ಡಿಎಂಕೆಯ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಹೇಳಿಕೆ ತಿಳಿಸಿದೆ.

 ಯೋಜನೆ ಕೈಬಿಡುವಂತೆ ಆಗ್ರಹಿಸಿದ ಅವರು, ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕೇಂದ್ರ ತನ್ನ ಪ್ರಭುತ್ವ ಸ್ಥಾಪಿಸಲು ಪ್ರಯತ್ನಿಸುತ್ತಿರವುದನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.

ಒಕ್ಕೂಟವಾದವನ್ನು ಬುಡಮೇಲು ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಇಂತಹ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News