×
Ad

ಏಕತೆಯ ಪ್ರತಿಮೆಯ ವೀಕ್ಷಣಾ ಗ್ಯಾಲರಿ ಸೋರುತ್ತಿದೆ ಎಂದರೆ ‘ವಿನ್ಯಾಸವೇ ಹಾಗೆ' ಎಂದ ಅಧಿಕಾರಿಗಳು!

Update: 2019-07-01 15:27 IST

ಅಹ್ಮದಾಬಾದ್, ಜು.1: ಗುಜರಾತ್ ರಾಜ್ಯದ ನರ್ಮದಾ ಜಿಲ್ಲೆ ಕೇವಡಿಯಾ ಎಂಬಲ್ಲಿ ಬರೋಬ್ಬರಿ 3,000 ಕೋಟಿ ರೂ. ವೆಚ್ಚದಲ್ಲಿ ತಲೆಯೆತ್ತಿರುವ ವಿಶ್ವದ ಅತ್ಯಂತ ಎತ್ತರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಏಕತೆಯ ಪ್ರತಿಮೆಯ ವೀಕ್ಷಣಾ ಗ್ಯಾಲರಿಯಲ್ಲಿ ಮಳೆ ನೀರು ತುಂಬಿರುವ ಬಗ್ಗೆ ಹಾಗೂ ಅದರ ಛಾವಣಿ ಸೋರುತ್ತಿರುವ ಕುರಿತಾದ ಇತ್ತೀಚಿಗಿನ ವರದಿಗಳಿಗೆ ಈ ಪ್ರತಿಮೆಗೆ ಸಂಬಂಧಿಸಿದ ಟ್ವಿಟರ್ ಹ್ಯಾಂಡಲ್ ಮೂಲಕ ಅಧಿಕಾರಿಗಳು ಅಚ್ಚರಿಯ ಉತ್ತರ ನೀಡಿದ್ದಾರೆ. ವೀಕ್ಷಣಾ ಗ್ಯಾಲರಿಯ ವಿನ್ಯಾಸವನ್ನು ಇದೇ ರೀತಿ ಇರಲೆಂದೇ ಮಾಡಲಾಗಿದೆ ಎಂಬ ಉತ್ತರ ಬಂದಿದೆ.

ಯುಟ್ಯೂಬರ್ ಧ್ರುವ್ ರಾಠಿ ಇತ್ತೀಚೆಗೆ ಪ್ರತಿಮೆಯ ವೀಕ್ಷಣಾ ಗ್ಯಾಲರಿಯ ವೀಡಿಯೋ ಶೇರ್ ಮಾಡಿದ್ದರು. ಅದರಲ್ಲಿ ಈ 597 ಅಡಿ ಎತ್ತರದ ಪ್ರತಿಮೆಯನ್ನು ವೀಕ್ಷಿಸಲು ಅನುವು ಮಾಡಿಕೊಡುವ ಗ್ಯಾಲರಿ ಒಳಗೆ ಮಳೆ ನೀರು ಎದುರಿನಿಂದ ಹಾಗೂ ಛಾವಣಿಯಿಂದ  ಬೀಳುತ್ತಿರುವುದು ಹಾಗೂ ಗ್ಯಾಲರಿಯಲ್ಲಿ ಜನರಿರುವಂತೆಯೇ ನೀರು ಶೇಖರಣೆಗೊಂಡಿರುವುದು ಕಾಣಿಸುತ್ತದೆ.

ಗ್ಯಾಲರಿ ವಿನ್ಯಾಸದಲ್ಲಿ ಏನಾದರೂ ದೋಷದಿಂದ ಹೀಗಾಗಿರಬಹುದೇ ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ. ಆದರೆ ಏಕತೆಯ ಪ್ರತಿಮೆಯ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಅಧಿಕಾರಿಗಳು ನೀಡಿದ ಉತ್ತರ ಹೀಗಿತ್ತು. ``ತೀವ್ರ ಗಾಳಿಯಿಂದಾಗಿ ಮಳೆ ನೀರು ವೀಕ್ಷಣ ಗ್ಯಾಲರಿ ಪ್ರವೇಶಿಸಿದೆ, ವಿನ್ಯಾಸವೇ ಹಾಗೆ ಹಾಗೂ ಪ್ರವಾಸಿಗರಿಗೆ ಪ್ರತಿಮೆಯನ್ನು ಚೆನ್ನಾಗಿ ವೀಕ್ಷಿಸಲು ಅನುವು ಮಾಡಿಕೊಡಲು ಅದು ತೆರೆದ ಗ್ಯಾಲರಿಯಾಗಿದೆ. ಶೇಖರಣೆಯಾದ ನೀರಿನ ವಿಚಾರವನ್ನು ನಿರ್ವಹಣಾ ತಂಡ ನಿಭಾಯಿಸಿದೆ.''

ಇದಕ್ಕೂ ಮುಂಚೆ ಈ ಹ್ಯಾಂಡಲ್ ನಲ್ಲಿ ಮೂಡಿ ಬಂದ ಇನ್ನೊಂದು ಟ್ವೀಟ್ ನಲ್ಲಿ ``ಮುಂಗಾರಿನ ಮೊದಲ ಮಳೆಯನ್ನು ಸ್ವಾಗತಿಸುತ್ತಾ ಏಕತೆಯ ಪ್ರತಿಮೆ ತನ್ನ ಸಂಪೂರ್ಣ ವೈಭವದಲ್ಲಿ ನಿಂತಿದೆ,'' ಎಂದು ಬರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News