ಮೇಲ್ವರ್ಗದ ಬಡವರಿಗೆ ಮೀಸಲಾತಿ ಪ್ರಶ್ನಿಸಿದ ಅರ್ಜಿ ವಿಚಾರಣೆ ಮುಂದೂಡಿಕೆ

Update: 2019-07-01 14:44 GMT

ಹೊಸದಿಲ್ಲಿ, ಜು.1: ಆರ್ಥಿಕವಾಗಿ ಅಶಕ್ತರಾಗಿರುವ ಮೇಲ್ವರ್ಗದ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ಮೀಸಲಾತಿ ಒದಗಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜುಲೈ 16ಕ್ಕೆ ಮುಂದೂಡಿದೆ.

ಈ ವಿಷಯವನ್ನು ಸುದೀರ್ಘವಾಗಿ ಆಲಿಸಬೇಕಿರುವುದರಿಂದ ಜುಲೈ 16ರ ಕಲಾಪಟ್ಟಿಯಲ್ಲಿ ಸೇರಿಸುವಂತೆ ನ್ಯಾ. ಎಸ್‌ಎ ಬೊಬ್ಡೆ ಹಾಗೂ ಬಿ.ಆರ್. ಗವಾಯ್ ಅವರಿದ್ದ ನ್ಯಾಯಪೀಠ ಸೂಚಿಸಿದೆ. ಆದರೆ, ಈ ಕುರಿತ ಕಾನೂನಿನ ಸಿಂದುತ್ವದ ಪರಿಶೀಲನೆಗೆ ಒಪ್ಪಿದ ನ್ಯಾಯಪೀಠ, ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು. ಶೇ.10 ಮೀಸಲಾತಿ ನಿರ್ಧಾರಕ್ಕೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಈ ಹಿಂದೆಯೇ ನ್ಯಾಯಾಲಯ ತಳ್ಳಿ ಹಾಕಿದೆ.

ಮೀಸಲಾತಿ ನೀಡಲು ಆರ್ಥಿಕ ಮಾನದಂಡ ಏಕೈಕ ಆಧಾರವಲ್ಲ ಎಂದು ಒಂದು ಅರ್ಜಿಯಲ್ಲಿ ಹೇಳಲಾಗಿದ್ದರೆ, ಶೇ.10 ಮೀಸಲಾತಿ ನೀಡಿದರೆ ಸುಪ್ರೀಂಕೋರ್ಟ್ ಮೀಸಲಾತಿಗೆ ನಿಗದಿಗೊಳಿಸಿದ ಶೇ.50ರ ಮಿತಿಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಇನ್ನೊಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಜನವರಿ 8ರಂದು ಲೋಕಸಭೆ ಹಾಗೂ ಜನವರಿ 9ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಿದ ಬಳಿಕ ಇದಕ್ಕೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News